

ದೇವನಹಳ್ಳಿ : ನಾಡಪ್ರಭು ಕೆಂಪೇಗೌಡರು ಎಲ್ಲ ಜನಾಂಗದವರ ಅಭಿವೃದ್ಧಿಗಾಗಿ ಪೇಟೆಗಳನ್ನು ನಿರ್ಮಿಸಿದ್ದರೂ ಅಂತಹ ಬೆಂಗಳೂರಿನ ನೂರಾರು ಕೆರೆಗಳು ರಾಜಕಾಲುವೆಗಳನ್ನು ನುಂಗಿದ ಭೂಗಳ್ಳರು ಈಗ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಾಲೂಕು ಹಳ್ಳಿಗಳ ಗೋಮಾಳ, ರಾಜಕಾಲುವೆ ಸರ್ಕಾರಿ ಭೂಮಿಗಳ ಮೇಲೆಯೂ ಕಣ್ಣಿಟ್ಟು ಅದನ್ನು ನುಂಗಲು ಹೊರಟಿದ್ದಾರೆ ಎಂದು ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಹಸಿರು ಸೇನೆಯ ಅಧ್ಯಕ್ಷ ಅರಳಾಪುರ ಮಂಜೇಗೌಡ ಕಿಡಿಕಾರಿದರು.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮುಂದೆ ಕಾರ್ಯಕರ್ತರ ಜತೆಗೂಡಿ ಸರ್ಕಾರಿ ಭೂಮಿ ಗೋಮಾಳ ರಕ್ಷಣೆಗಾಗಿ ಹಮ್ಮಿಕೊಂಡಿದ್ದ ಹೋರಾಟ ಪಾದಾಯತ್ರೆ ದೃಢಸಂಕಲ್ಪದ ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಚಿಕ್ಕಮಂಗಳೂರು ಜಿಲ್ಲೆಯ ನೆರಡಿ ಗ್ರಾಮದ ದನಕರಿಗಳು ಮೇಯುವು ಹುಲ್ಲುಗಾವಲಿನ 25 ಎಕರೆ ಭೂಮಿಯಲ್ಲಿ ಯಾರೋ ಒಬ್ಬ ಪ್ರಭಾವಿ ಬಲಾಢ್ಯನ ಹೆಸರಿಗೆ ಮಾಡಲು ಹೊರಟಿದ್ದಾರೆ. ಗೋವುಗಳ ಮೇವಿಗೆ ಗೋಮಾಳ ಉಳಿಸಿ ಎಂದು ನಾವು ಅಲ್ಲಿನ ಡಿಸಿಗೆ ಕೇಳಿದರೆ ನೀವು ಹೋರಾಟ ಮಾಡುವುದಿದ್ದರೆ ಮಾಡಿಕೊಳ್ಳಿ ಎಂದು ಹಾರಿಕೆ ಉತ್ತರ ಕೊಡುತ್ತಾರೆ. ಹಾಗಾಗಿ ಮೇವಿಲ್ಲದೆ ರಾಜ್ಯದಲ್ಲಿ ಗೋಮಾಳಗಳಿಲ್ಲದೇ ನರಳಾಡುವ ಗೋವುಗಳಿಗೆ ದಯಾಮರಣ ಕೊಡಿ, ರಾಜ್ಯದ ಗೋಮಾಲ, ರಾಜಕಾಲುವೆ, ಚೆಕ್ ಡ್ಯಾಂಗಳನ್ನು ಉಳಿಸಿ ಎಂದು ಸಿದ್ದರಾಮಯ್ಯ ಅವರನ್ನು ಕೇಳಲು ನಾವು ಆ.13 ರಿಂದ ನೆರಡಿ ಗ್ರಾಮದಿಂದ 10 ದಿನಗಳ ಕಾಲ ದನಕರುಗಳ ಸಹಿತ ಪಾದಯಾತ್ರೆ ಹಮ್ಮಿಕೊಂಡಿದ್ದೆವೆ ಎಂದರು.
ಯುವ ಘಟಕದ ಅಧ್ಯಕ್ಷ ಡಾ.ಬಿ.ಕೆ ವಿನೋದಕುಮಾರಗೌಡ ಮಾತನಾಡಿ, ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಹಾಗೂ ಕೆಐಎಡಿಬಿ ಕೈಗಾರಿಕಾ ಪ್ರದೇಶಗಳು ಆದ ಬಳಿಕ ಭೂಮಿ ಬೆಲೆ ಗಗನಕ್ಕೇರಿ ಗೋಮಾಳ ಸರ್ಕಾರಿ ರಾಜಕಾಲುವೆ, ಕೆರೆ ಕುಂಟೆ ಕಟ್ಟೆ, ಚೆಕ್ ಡ್ಯಾಂಗಳು ಮಾಯವಾಗುತ್ತಿವೆ ಇದಕ್ಕೆ ಇಂಬು ನೀಡುವಂತೆ ಭೂಗಳ್ಳರು ತಾಲೂಕಿನ ಸಿಂಗವಾರ ದೊಡ್ಡಸಾಗರಹರ್ಳಳಿ ಬಳಿ ಬೆಟ್ಟದ ನೀರು ಹರಿಯುವ ಜಾಗದಲ್ಲಿ ಸರ್ಕಾರ ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿದ್ದ ಚಕ್ ಡ್ಯಾಂ ಕಿತ್ತು ನಾಶ ಮಾಡಿ ಭೂ ಒತ್ತುವರಿ ಮಾಡಿದಾರೆ ಅಲ್ಲದೇ ಯಾವುದೋ ಒಂದು ಸತ್ಸಂಗ ಆಶ್ರದ ಹೆಸರಲ್ಲಿ ಸರ್ಕಾರಿ ಖರಾಬು, ಬಂಡಿಜಾಡು, ಗೋಮಾಳ ಒತ್ತುವರಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘ ಹಸಿರು ಸೇನೆಯ ಗೌರವಾಧ್ಯಕ್ಷ ರಾಜಣ್ಣ, ಪ್ರಧಾನಕಾರ್ಯದರ್ಶಿ ನಂಜುಂಡಪ್ಪ, ಸಂಚಾಲಕ ಚಂದ್ರು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಮುದ್ದೇಗೌಡ, ಚಿಕ್ಕಮಗಳೂರು ಅಧ್ಯಕ್ಷ ಸುಂದರೇಶಗೌಡ, ಹಾಸನ ಜಿಲ್ಲಾಧ್ಯಕ್ಷ ಪ್ರಕಾಶ್, ದೇವನಹಳ್ಳಿ ತಾಲೂಕು ಅಧ್ಯಕ್ಷ ಜಯಶಂಕರ್ ಇದ್ದರು.