ಬೆಂಕಿ ತಗುಲಿ ನೂರಾರು ಅಡಕೆ ಗಿಡ ಭಸ್ಮ

16sirsi7 ARECA
Published on

ಶಿರಸಿ: ಅಡಕೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ನೂರಾರು ಗಿಡಗಳು ಸುಟ್ಟ ಘಟನೆ ಬನವಾಸಿ ಸಮೀಪದ ಭಾಶಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಇಲ್ಲಿಯ ತಿಮ್ಮಮ್ಮ ನಾಯ್ಕ ಎಂಬುವವರಿಗೆ ಸೇರಿದ 3 ಎಕರೆ ಅಡಕೆ ತೋಟ ಸುಟ್ಟಿದೆ. ಸಂಜೆ ತೋಟಕ್ಕೆ ನೀರು ಹಾಯಿಸಲು ಬಂದಾಗ ತೋಟಕ್ಕೆ ಬೆಂಕಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಫಲ ನೀಡುತ್ತಿದ್ದ ನೂರಾರು ಅಡಕೆ ಗಿಡಗಳ ಜತೆಗೆ 5-6 ವರ್ಷದ ಅಡಕೆ ಗಿಡಗಳು, ನೀರಿನ ಪೈಪ್, ಡ್ರಿಪ್ ಪೈಪ್​ಗಳು ಸಂಪೂರ್ಣವಾಗಿ ನಾಶವಾಗಿವೆ. ತೋಟದಲ್ಲಿ ವಿದ್ಯುತ್ ಲೈನ್ ಹಾದು ಹೋಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ತೋಟದ ಪಕ್ಕದಲ್ಲಿರುವ ರುದ್ರ ಶಿವಪ್ಪ ನಾಯ್ಕ, ಜಯಾನಂದ ನಾಯ್ಕ, ಜನಾರ್ದನ ನಾಯ್ಕ ಅವರ ತೋಟಕ್ಕೂ ಬೆಂಕಿ ತಗುಲಿ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಭಾಶಿ ಗ್ರಾಪಂ ಸದಸ್ಯ ಗಜಾನನ ಗೌಡ ಹಾಗೂ ಹೆಸ್ಕಾಂ ಕಚೇರಿ, ಕಂದಾಯ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net