ರಂಗಭೂಮಿಯಿಂದ ನೂರಾರು ಸೃಜನಶೀಲತೆ ಸೃಷ್ಟಿ

19
Published on

ಮೈಸೂರು: ರಂಗಭೂಮಿ ಸದಾ ಪ್ರಯೋಗಶೀಲತೆಗೆ ಒಳಗಾಗುವ ಮೂಲಕ ವಿಸ್ತರಣೆಯಾಗಿ ನೂರಾರು ಸೃಜನಶೀಲತೆಯನ್ನು ಸೃಷ್ಟಿಸುತ್ತಿದೆ ಎಂದು ನಿರಂತರ ಮೈಸೂರಿನ ರಂಗ ನಿರ್ದೇಶಕ ಎಂ.ಎಂ.ಸುಗುಣ ಅಭಿಪ್ರಾಯಪಟ್ಟರು.

ನಿರಂತರ ಫೌಂಡೇಷನ್‌ನಿಂದ ನಿರಂತರ ರಂಗ ಪಯಣದ ನಾಟಕ ಪ್ರದರ್ಶನ ಭಾಗವಾಗಿ ಜಯಲಕ್ಷ್ಮೀಪುರಂನ ಮಾತೃ ಮಂಡಳಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ‘ಕೃಣ್ಣೇಗೌಡನ ಆನೆ’ ನಾಟಕ ಪ್ರದರ್ಶನದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಂಗಭೂಮಿ ಸದಾ ಪ್ರಯೋಗಶೀಲತೆಯನ್ನು ಒಳಗೊಂಡಿರುತ್ತದೆ. ಕಳೆದ ಮೂರು ದಶಕದಿಂದ ನಿರಂತರ ರಂಗಭೂಮಿಯನ್ನು ಒಂದು ಭಾಷೆಯಂತೆ ಬಳಸುತ್ತಾ ಸಮಾಜದೊಟ್ಟಿಗೆ ಸಂಧಿಸುತ್ತಿದೆ. ರಂಗಭೂಮಿಯ ವಿಸ್ತರಣೆಯಾಗಿ ನೂರಾರು ಸೃಜನಶೀಲ ಕಾರ್ಯಕ್ರಮಗಳನ್ನು ಈವರೆಗೂ ಹಮ್ಮಿಕೊಂಡು, ರಾಜ್ಯಾದ್ಯಂತ ಸಂಚರಿಸಿದೆ ಎಂದು ಹೇಳಿದರು.

ಪ್ರತಿ ವರ್ಷವೂ ಒಂದೊಂದು ಪ್ರಚಲಿತ ವಿದ್ಯಮಾನವನ್ನು ಆಶಯವನ್ನಾಗಿಸಿಕೊಂಡು ನಾಟಕವನ್ನು ರೂಪಿಸುತ್ತಾ ಕಲಾವಿದರಲ್ಲಿ ಸಂವೇದನೀಯನನ್ನಾಗಿಸುವುದೇ ಮುಖ್ಯ ಗುರಿ. ಸಹಜ ಬದುಕಿನಿಂದ ವಿಮುಖರಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಆಶಯ, ಆದರ್ಶ, ಮೌಲ್ಯಗಳೆಲ್ಲವೂ ಹಾಸ್ಯದಂತೆ ಕಾಣುತ್ತಿದೆ. ಹಾಗಾಗಿ ಇವು ನಮ್ಮನ್ನು ಸಂಧಿಸುವ ಬಿಂದುವನ್ನು ಹುಡುಕುತ್ತಾ, ಅನನ್ಯತೆಯೆಡೆಗೆ ಮುಖಾಮುಖಿಯಾಗುವುದು ಈ ನಾಟಕದ ಉದ್ದೇಶ ಎಂದು ಬಣ್ಣಿಸಿದರು.

ನಮ್ಮೊಳಗೆ ಒಂದು ಪ್ರಕೃತಿಯಿದೆ. ಅಂತೆಯೇ ನಮ್ಮ ಹೊರಗೂ ಒಂದು ಪ್ರಕೃತಿಯಿದೆ. ಎರಡರಲ್ಲೂ ಅಗಾಧ ವೈವಿಧ್ಯತೆಯಿದೆ. ಆದರೂ ಪರಸ್ಪರ ಸಮಗ್ರತೆಯನ್ನು ಕಾಯ್ದುಕೊಂಡಿವೆ. ಹಾಗಾಗಿಯೇ ಏಕತೆಯ ಬೇರು ಅನನ್ಯತೆಯಲ್ಲಡಗಿದೆ. ಜಗತ್ತಿನಲ್ಲಿ ಪ್ರತಿಯೊಂದು ಕಣಕ್ಕೂ ತನ್ನದೇ ಆದ ಅಸ್ತಿತ್ವವಿರುವಂತೆ ಪ್ರತಿಯೊಬ್ಬ ಮನುಷ್ಯನಿಗೂ ಇದೆ ಎಂದು ಹೇಳಿದರು.

ಮಾತೃ ಮಂಡಳಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ್ ಮಾತನಾಡಿ, ರಂಗಭೂಮಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ. ಯುವಕರಿಗೆ ಸುಲಭ ಮಾರ್ಗದಲ್ಲಿ ತಮ್ಮ ಆಸಕ್ತಿಯನ್ನು ವಿಸ್ತೃತಗೊಳಿಸಿಕೊಳ್ಳಲು ಇರುವ ಆಯಾಮವೇ ಇಂತಹ ನಾಟಕಗಳು. ಇವು ಇನ್ನು ಹೆಚ್ಚು ಹೆಚ್ಚು ಪ್ರದರ್ಶನ ಕಾಣಬೇಕು ಎಂದು ಹೇಳಿದರು.

ಶಿಕ್ಷಕರಾದ ವೆಂಕಾರೆಡ್ಡಿ, ವೆಂಕಟೇಶ್, ಬೋರಯ್ಯ, ಗಿರಿಜಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net