ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನೂತನ ಅಧ್ಯಕ್ಷರಿಗೆ ನೂರಾರು ಸವಾಲು

images
Published on

ಆರ್.ಕೃಷ್ಣ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಹೊಸ ಸವಾಲುಗಳು ಅವರ ಮುಂದಿವೆ.
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹಲವು ಯೋಜನೆಗಳನ್ನು ದಡ ಸೇರಿಸಬೇಕಾದ ಗುರುತರ ಜವಾಬ್ದಾರಿ ನೂತನ ಅಧ್ಯಕ್ಷರ ಮೇಲಿದೆ. ಮುಡಾ ಅಭಿವೃದ್ಧಿಪಡಿಸಿರುವ ಬಡಾವಣೆಗಳಿಗೆ ಮೂಲಸೌಲಭ್ಯ ಕಲ್ಪಿಸುವ ಜತೆಗೆ ಈಗಾಗಲೇ ಘೋಷಣೆಯಾಗಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ತಮ್ಮ ಪ್ರಭಾವ ಬೀರಬೇಕಿದೆ.
ಹಳೇ ಬಡಾವಣೆಗಳಿಗೆ ಮೂಲಸೌಲಭ್ಯ:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ನಿರ್ಮಾಣಗೊಂಡಿರುವ ಲಾಲ್‌ಬಹದ್ದೂರ್ ಶಾಸ್ತ್ರಿ ನಗರ, ಶಾಂತವೇರಿ ಗೋಪಾಲಗೌಡ ಬಡಾವಣೆ, ಲಲಿತಾದ್ರಿಪುರ ಬಡಾವಣೆ, ಆರ್.ಟಿ.ನಗರ ಒಂದು ಹಾಗೂ ಎರಡನೇ ಹಂತದ ಬಡಾವಣೆಗಳಿಗೆ ಮೂಲಸೌಲಭ್ಯಗಳ ಕೊರತೆ ಕಾಡುತ್ತಿದೆ. ಮುಡಾದಿಂದ ನಿರ್ಮಾಣವಾಗಿರುವ ಬಡಾವಣೆಗೂ ಕುಡಿಯುವ ನೀರು, ಕೆಲವು ಕಡೆ ರಸ್ತೆ, ವಿದ್ಯುತ್ ಸಂಪರ್ಕ ದೊರೆತಿಲ್ಲ. ಸೌಲಭ್ಯದ ಕೊರತೆಗಳ ನಡುವೆ ಕೆಲವರು ಮನೆ ನಿರ್ಮಿಸಿಕೊಂಡಿದ್ದು, ಮನೆಗಳಿಂದ ಕಸ ವಿಲೇವಾರಿ ಮಾಡಲು ಮುಡಾದಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಡಾ ನಿರ್ಮಿಸಿರುವ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಯೇ ಬೀಳುತ್ತಿದ್ದು, ಎಲ್ಲೆಡೆ ಕಸಮಯವಾಗುತ್ತಿವೆ.
ಖಾಸಗಿಯವರು ನಿರ್ಮಿಸಿ ಮುಡಾಕ್ಕೆ ಹಸ್ತಾಂತರಗೊಂಡಿರುವ ಬಡಾವಣೆಗಳ ಸಮಸ್ಯೆ ಹೇಳತೀರದಾಗಿದೆ. ಕೆಲವು ಬಡಾವಣೆಗಳಲ್ಲಿ ಮಾಡಿದ ಕಳಪೆ ಕಾಮಗಾರಿಯಿಂದ ರಸ್ತೆ, ಒಳಚರಂಡಿ ವ್ಯವಸ್ಥೆಯೇ ಇಲ್ಲವಾಗಿದೆ. ಕುಡಿಯುವ ನೀರಿಗೆ ಬೋರ್‌ವೆಲ್ ಅವಲಂಬಿಸುವಂತಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತೊಂದರೆ ಆಗುತ್ತಿದೆ. ಮುಡಾಕ್ಕೆ ಹಸ್ತಾಂತರಗೊಂಡಿರುವ ಇಂತಹ ಬಡಾವಣೆಗಳಿಗೆ ಕನಿಷ್ಠ ಸೌಲಭ್ಯ ಕಲ್ಪಿಸುವ ಪ್ರಯತ್ನಕ್ಕೆ ಮುಂದಾಗಬೇಕಿದೆ.
ಹೊಸ ಬಡಾವಣೆಗಳ ಸವಾಲು: ನಿವೇಶನ ಕೋರಿ ಮುಡಾಕ್ಕೆ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಒಂದೂವರೆ ಲಕ್ಷ ಮೀರಿದೆ. ಆರ್.ಟಿ.ನಗರ, ಲಾಲ್ ಬಹದ್ದೂರ್ ಶಾಸ್ತ್ರಿ ನಗರ, ಲಲಿತಾದ್ರಿಪುರ ಬಡಾವಣೆ ಬಳಿಕ ಯಾವುದೇ ಹೊಸ ಬಡಾವಣೆ ನಿರ್ಮಾಣಗೊಂಡಿಲ್ಲ. ಮೈಸೂರು ತಾಲೂಕಿನ ದಾರಿಪುರ ಹಾಗೂ ಬೊಮ್ಮೇನಹಳ್ಳಿ ಗ್ರಾಮದಲ್ಲಿ ರೈತರ ಸಹಭಾಗಿತ್ವದಲ್ಲಿ 50:50 ಅನುಪಾತದಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ 15 ಸಾವಿರ ನಿವೇಶನ ಹಂಚಿಕೆ ಮಾಡುವುದಾಗಿ ಘೋಷಿಸಲಾಗಿತ್ತು. ಅಧ್ಯಕ್ಷರಾಗಿದ್ದ ಎಚ್.ವಿ.ರಾಜೀವ್, ಯಶಸ್ವಿ ಸೋಮಶೇಖರ್ ಅವರು ಸಹ ಕ್ರಮವಾಗಿ 250 ಹಾಗೂ 750 ಎಕರೆಯಲ್ಲಿ ಬಡಾವಣೆಗಳನ್ನು ನಿರ್ಮಿಸುವ ಪ್ರಯತ್ನ ಮಾಡಿದ್ದರು.
ಆದರೆ ಜಮೀನು ನೀಡಲು ಕೆಲ ರೈತರು ಮುಂದೆ ಬಂದರೆ, ಮತ್ತೆ ಕೆಲವರು ತಗಾದೆ ತೆಗೆದರು. ರೈತರ ಮನವೊಲಿಸುವ ಪ್ರಯತ್ನದ ಜತೆಗೆ ನಗರಾಭಿವೃದ್ಧಿ ಇಲಾಖೆಯಿಂದ ನಿರೀಕ್ಷಿತ ಸಹಕಾರ ದೊರೆಯದ ಕಾರಣ ಯೋಜನೆ ನನೆಗುದಿಗೆ ಬಿದ್ದಿತು.

ಇತ್ಯರ್ಥವಾಗದ ಸಿಎ ನಿವೇಶನ ಹಂಚಿಕೆ
ನಾಲ್ಕು ವರ್ಷದಿಂದ ಸಿಎ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಎರಡು ವರ್ಷದ ಹಿಂದೆ ಎಚ್.ವಿ.ರಾಜೀವ್ ಅವರ ಅವಧಿಯಲ್ಲಿ ಏಕಕಾಲಕ್ಕೆ 400ಕ್ಕೂ ಹೆಚ್ಚು ಸಿಎ ನಿವೇಶನಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿರುವ ಸಿಎ ನಿವೇಶನ ಆಕಾಂಕ್ಷಿಯಾಗಿರುವ ಸಂಘ- ಸಂಸ್ಥೆಗಳು ಚಾತಕ ಪಕ್ಷಿಗಳಂತೆ ಕಾಯುತ್ತಿವೆ. ನೂತನ ಅಧ್ಯಕ್ಷರ ಅವಧಿಯಲ್ಲಿ ಸಿಎ ನಿವೇಶನ ಪ್ರಕ್ರಿಯೆ ಇತ್ಯರ್ಥವಾಗಲಿದೆ ಎನ್ನುವ ವಿಶ್ವಾಸದಲ್ಲಿ ಹಲವು ಸಂಘ-ಸಂಸ್ಥೆಗಳಿವೆ.

ಯೋಜನೆಗಳಿಗೆ ಬೇಕಿದೆ ವೇಗ
ಹಳೇ ಉಂಡವಾಡಿ ಬಳಿ ಕಾವೇರಿ ನದಿ ಮೂಲದಿಂದ ಮೈಸೂರು ನಗರಕ್ಕೆ ಮುಡಾ ಹಾಗೂ ಮೈಸೂರು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯ ಮತ್ತು ಹೊರಗಿನ 92 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಕುಂಟುತ್ತಾ ಸಾಗಿದ್ದು, ಅದಕ್ಕೆ ವೇಗ ತರಬೇಕಿದೆ.
ಮೈಸೂರು-ಬೆಂಗಳೂರು ರಸ್ತೆ ಹಾಗೂ ರಿಂಗ್ ರಸ್ತೆ ಸೇರುವ ಜಾಗದಲ್ಲಿ ಮತ್ತು ಮೈಸೂರು ಹುಣಸೂರು ರಸ್ತೆಯ ನಾಗವಾಲ ಜಂಕ್ಷನ್‌ನಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಕಾರ್ಯ, ನಗರದ ಸಂಚಾರ ಒತ್ತಡ ನಿವಾರಣೆಗೆ ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್), ನಗರದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಮಲ್ಟಿ ಲೆವಲ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವ ಉದ್ದೇಶಿತ ಯೋಜನೆಗಳನ್ನು ಸಾಕಾರಗೊಳಿಸಬೇಕಿದೆ.

ಕಾರ್ಯಗತವಾಗದ ಗುಂಪು ಮನೆ ಯೋಜನೆ
ಬಡವರಿಗೆ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಮಹತ್ವದ ಯೋಜನೆಗೆ ಅರ್ಜಿ ಆಹ್ವಾನಿಸಿ ಮೂರು ವರ್ಷ ಕಳೆದರೂ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ.
ಗುಂಪು ಮನೆ ವಸತಿ ಯೋಜನೆಗಾಗಿ ವಿಜಯನಗರ 4ನೇ ಹಂತದಲ್ಲಿ 560 ಮನೆಗಳು, ದಟ್ಟಗಳ್ಳಿಯಲ್ಲಿ 392 ಮನೆಗಳನ್ನು ನಿರ್ಮಿಸಲು ಕ್ರಮ ವಹಿಸಲಾಗಿತ್ತು. ಆದರೆ ದಟ್ಟಗಳ್ಳಿಯ ಯೋಜನೆಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದರೂ ಯೋಜನೆಯನ್ನು ಇನ್ನೂ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ.
ಹಂಚ್ಯಾ ಸಾತಗಳ್ಳಿ ‘ಬಿ’ ವಲಯದಲ್ಲಿ ಅಂದಾಜು 20.80 ಎಕರೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಜಾಗದ ವಿಷಯದಲ್ಲಿ ಕಂದಾಯ ಇಲಾಖೆ ನಡುವೆ ವಿವಾದ ಏರ್ಪಟ್ಟಿದ್ದರಿಂದ ನಗರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕೂಡ ಹಾಗೆಯೇ ಉಳಿದಿದೆ.

ಎಲ್ಲರ ಸಹಕಾರದಿಂದ ಕಾರ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಾಸವಿಟ್ಟು ನನ್ನನ್ನು ಮುಡಾ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಗುಂಪು ಮನೆ, ಸಿಎ ನಿವೇಶನ, ಕುಡಿಯುವ ನೀರು ಯೋಜನೆ ಸೇರಿದಂತೆ ಹೊಸ ಯೋಜನೆಗಳನ್ನು ಜಾರಿಗೊಳಿಸಲು ಎಲ್ಲರ ಸಹಕಾರದಿಂದ ಕಾರ್ಯ ನಿರ್ವಹಿಸುತ್ತೇನೆ.
ಕೆ.ಮರೀಗೌಡ
ಮುಡಾ ನೂತನ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net