ಶತಮಾನಗಳ ಪರಂಪರೆಯ ದಸರಾಗೊಂಬೆ ಆಕರ್ಷಣೆ

udp-15-gombe 1
Published on

ಉಡುಪಿ: ಹಳೇ ಮೈಸೂರು ಪ್ರಾಂತ್ಯದಲ್ಲಿ ಕಂಡುಬರುವ ದಸರಾ ಬೊಂಬೆಗಳು ಈಗ ಉಡುಪಿಯಲ್ಲೂ ಜನಪ್ರಿಯವಾಗುತ್ತಿದ್ದು, ನವರಾತ್ರಿ ಹಬ್ಬದ ಮೆರುಗು ಹೆಚ್ಚಿಸುತ್ತಿವೆ. ಉದ್ಯೋಗ ನಿಮಿತ್ತ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿರುವ ಮೈಸೂರು ಭಾಗದವವರು ಮನೆಗಳಲ್ಲಿ ಗೊಂಬೆಗಳ ಅಲಂಕಾರ ಮಾಡುತ್ತಿದ್ದಾರೆ.
ಕಿನ್ನಿಮೂಲ್ಕಿಯಲ್ಲಿ ಯೂನಿಯನ್​ ಬ್ಯಾಂಕ್​ ನಿವೃತ್ತ ಉದ್ಯೋಗಿ, ಮೂಲತ ಮೈಸೂರಿನ ರಾಜೇಂದ್ರ ಎಂಬುವರು ತಮ್ಮ ಮನೆಯಲ್ಲಿ 7 ವರ್ಷಗಳಿಂದ ದಸರಾ ಗೊಂಬೆ ಪ್ರತಿಷ್ಠಾಪಿಸುತ್ತಿದ್ದಾರೆ. ನವರಾತ್ರಿ ಪಾಡ್ಯದಂದು ಕಲಶ ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಂತರ ವಿಜಯದಶಮಿವರೆಗೆ ಪ್ರತಿದಿನ ಬೆಳಗ್ಗೆ ಹಾಗೂ ಸಾಯಂಕಾಲ ಪೂಜೆ ಸಲ್ಲಿಸಲಾಗುತ್ತಿದೆ. ಉಡುಪಿ ಜನರಿಗೆ ಗೊಂಬೆಗಳ ದಸರಾ ಅಪೂರ್ವ ಆಗಿರುವುದರಿಂದ ಸುತ್ತಲಿನ ನೂರಾರು ಜನ ಮನೆಗೆ ನಿತ್ಯ ಭೇಟಿ ನೀಡುತ್ತಿದ್ದಾರೆ.

2 ಶತಮಾನದ ಗೊಂಬೆಗಳು
ಅಜ್ಜಿಯಿಂದ ಬಳುವಳಿಯಾಗಿ ಬಂದಿದ್ದ ಗೊಂಬೆಗಳನ್ನು ರಾಜೇಂದ್ರ ಅವರ ತಾಯಿ ನವರಾತ್ರಿ ಸಂದರ್ಭ ಪೂಜಿಸುತ್ತ್ತಿದ್ದರು. ಸಹೋದರಿಯರು ಇಲ್ಲದ ಕಾರಣ ರಕ್ತಚಂದನದಲ್ಲಿ ನಿರ್ಮಿಸಲಾದ 2 ಶತಮಾನ ಹಳೆಯ ಪಟ್ಟದ ರಾಜ&ರಾಣಿ ಗೊಂಬೆಗಳು ರಾಜೇಂದ್ರ ಅವರ ಪಾಲಾಗಿದೆ. ಹೀಗಾಗಿ ಸಂಪ್ರದಾಯ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಜತೆಗೆ ದಶಾವತಾರ ಗೊಂಬೆಗಳು, ಪಶ್ಚಿಮ ಬಂಗಾಲದ ದುರ್ಗೆ, ಒಡಿಶಾದ ಪುರಿಯಿಂದ ತಂದಿರುವ ಬಲರಾಮ, ಕೃಷ್ಣ, ಸುಭದ್ರೆಯ ಗೊಂಬೆಗಳು, ಜಟಾಧಾರಿ ಶಿವ, ದೀಪದ ಮಲ್ಲಿ, ಕಂಚಿನ ಎತ್ತಿನ ಬಂಡಿ, ಮೂರ್ತಿಗಳ ಸಹಿತ 200ಕ್ಕೂ ಅಧಿಕ ಗೊಂಬೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವರ್ಷ 1 ಗೊಂಬೆಗಳನ್ನು ಗುಂಪಿಗೆ ಹೊಸದಾಗಿ ಸೇರ್ಪಡೆಗೊಳಿಸಲಾಗುತ್ತದೆ.

ಬೊಂಬೆ ಬಾಗಿನ, ಆರತಿ
ಪ್ರತಿದಿನ ಸಾಯಂಕಾಲ ಗೊಂಬೆಗಳನ್ನು ನೋಡಲು ಬರುವ ಮುತೆದೆಯರಿಗೆ ಬೊಂಬೆ ಬಾಗಿನ ಹಾಗೂ ಯುವತಿಯರಿಗೆ ಕುಮಾರಿ ಬಾಗಿನ ಅರ್ಪಿಸಲಾಗುತ್ತದೆ. ವಿಜಯದಶಮಿ ದಿನ ಪಟ್ಟದ ಗೊಂಬೆಗಳನ್ನು ಮಲಗಿಸುವ ಸಂಪ್ರದಾಯವಿದೆೆ. ಏಕಾದಶಿಯಂದು ಹಳೇ ಬಟ್ಟೆಗಳಲ್ಲಿ ಬೊಂಬೆಗಳನ್ನು ಕಟ್ಟಿ ಜೋಪಾನವಾಗಿ ಎತ್ತಿಡಲಾಗುತ್ತದೆ. ಮುಂದಿನ ನವರಾತ್ರಿಗೆ ಮತ್ತಷ್ಟು ಗೊಂಬೆಗಳ ಸೇರ್ಪಡೆಯೊಂದಿಗೆ ಅಲಂಕಾರ ನೆರವೇರಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net