ಹುನ್ನೂರಿನ ಗ್ಯಾರಂಟಿ ಇನ್ನಿಲ್ಲ

Hundred-year guarantee is no more1
ಹುನ್ನೂರು-ಮಧುರಖಂಡಿ ಬಸವ ಗುರುಕುಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ದೀಪಾವಳಿ ಬೈಲಾಟದಲ್ಲಿ ಗ್ಯಾರಂಟಿ ಪಾತ್ರದಲ್ಲಿ ಅಭಿನಯಿಸಿದ್ದ ಪ್ರಲ್ಹಾದ ಗುರವ.(ಸಂಗ್ರಹ ಚಿತ್ರ)
Published on

ಜಮಖಂಡಿ: ದೀಪಾವಳಿ ಬೈಲಾಟದಲ್ಲಿ ಹಾಸ್ಯ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿ ಹುನ್ನೂರಿನ ಗ್ಯಾರಂಟಿ ಎಂದೇ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದ ಪ್ರಹ್ಲಾದ ನಿಂಗಪ್ಪ ಗುರವ (83) ಮಂಗಳವಾರ ಬೆಳಗ್ಗೆ ನಿಧನರಾದರು.

ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಅಪಾರ ಜನಸ್ತೋಮ ಮಧ್ಯೆ ಹುನ್ನೂರಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ದೀಪಾವಳಿ ಬೈಲಾಟದ ಗ್ಯಾರಂಟಿ ಪಾತ್ರದಿಂದ ಪ್ರಹ್ಲಾದ ಅವರು ಹುನ್ನೂರಿನ ಗ್ಯಾರಂಟಿ ಎಂದೇ ಪ್ರಸಿದ್ಧಿಯಾಗಿದ್ದರು. ಅವರ ಹಾಸ್ಯ ಅಭಿನಯದಿಂದಾಗಿ ಹುನ್ನೂರು ಎಂದರೆ ದೀಪಾವಳಿ, ದೀಪಾವಳಿ ಎಂದರೆ ಹುನ್ನೂರು ಎನ್ನುವಷ್ಟು ಪ್ರಸಿದ್ಧಿಯಾಗಿದೆ.

ಟಿವಿ, ಮೊಬೈಲ್ ಹಾವಳಿ ಇಲ್ಲದ ಕಾಲದಲ್ಲಿ ರಾಜ್ಯ ಸೇರಿ ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಹುನ್ನೂರಿನ ಶ್ರೀ ಭುವನೇಶ್ವರಿ ಪ್ರಾಸಾದಿಕ ನಾಟ್ಯ ಸಂಘದಿಂದ ಪ್ರದರ್ಶನಗೊಳ್ಳುತ್ತಿದ್ದ ದೀಪಾವಳಿ ಬೈಲಾಟ ಕಲಾವಿದರ ಉತ್ತಮ ಅಭಿನಯದಿಂದಾಗಿ ಎಲ್ಲರ ಮನೆ ಮಾತಾಗಿತ್ತು. ಎಚ್. ಎನ್. ಹೂಗಾರ ಅವರು ರಚಿಸಿದ ಸಹೋದರ ಅರ್ಥಾತ್ ದೀಪಾವಳಿ ನಾಟಕದ ಖಳನಾಯಕನ ಪಾತ್ರವೇ ಗ್ಯಾರಂಟಿ.

ನಂತರ ಖಳನಾಯಕನ ಪಾತ್ರವನ್ನು ಹಾಸ್ಯ ಪಾತ್ರಕ್ಕೆ ಬದಲಿಸಿ ನಾಟಕವನ್ನು ಬೈಲಾಟಕ್ಕೆ ಪರಿವರ್ತಿಸಲಾಗಿತ್ತು.

ಹಿರಿಯ ಕಲಾವಿದ ಪ್ರಹ್ಲಾದ ಗುರವ
ಹಿರಿಯ ಕಲಾವಿದ ಪ್ರಹ್ಲಾದ ಗುರವ

1940 ಮೇ 12 ರಂದು ಜನಿಸಿದ ಪ್ರಹ್ಲಾದ ಅವರು, ಏಳನೇ ತರಗತಿವರೆಗೆ ಕಲಿತಿದ್ದರು. ನಾಲ್ಕನೇ ತರಗತಿಯಲ್ಲಿ ಇರುವಾಗಲೇ ಮಾಸ್ತರಪ್ಪ ನಾಟಕಕ್ಕೆ ಬಣ್ಣ ಹಚ್ಚಿಕೊಂಡು ಬಾಲಚಂದ್ರ, ಸತ್ಯ ಹರಿಶ್ಚಂದ್ರ, ಮಲಮಗಳು, ಸೌಭಾಗ್ಯಲಕ್ಷ್ಮಿ ನಾಟಕದಲ್ಲಿ ಅಭಿನಯಿಸಿದ್ದರು. ಹುನ್ನೂರು -ಮಧುರಖಂಡಿಯ ಬಸವಗುರುಕುಲದ ಶರಣ ಡಾ. ಈಶ್ವರ ಮಂಟೂರ ಅವರು ಗುರವ ಅವರಿಗೆ ನಗೆ ಗಾರುಡಿಗ ಬಿರುದು ನೀಡಿ ಸನ್ಮಾನಿಸಿದ್ದರು.

ಈ ಬೈಲಾಟ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಮೂರೂವರೆ ಸಾವಿರಕ್ಕಿಂತಲೂ ಹೆಚ್ಚು ಪ್ರಯೋಗಗಳನ್ನು ಕಂಡಿದೆ. ಪ್ರಹ್ಲಾದ ಅವರು ಗ್ಯಾರಂಟಿ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net