

ಹನೂರು: ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕಿದ್ದ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮುಗಳಿಗೆ ಮಾತ್ರ ಸೀಮಿತವಾಗಿದ್ದು, ರೈತರಿಗೆ ಪ್ರಯೋಜನಕ್ಕೆ ಬಾರದಂತಾಗಿದೆ.
ಹನೂರು ಭಾಗ ಕೃಷಿ ಅವಲಂಬಿತ ಪ್ರದೇಶ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ವ್ಯವಸಾಯವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ರೈತರ ಬೆಳೆಗಳಿಗೆ ಮಾರುಕಟ್ಟೆ ಅಗತ್ಯವಾಗಿತ್ತು. ಈ ಹಿಂದೆ ಹನೂರು ಕೊಳ್ಳೇಗಾಲ ತಾಲೂಕಿಗೆ ಒಳಪಟ್ಟಿತ್ತು. ಹಾಗಾಗಿ, ಕೊಳ್ಳೇಗಾಲ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಯ ಹನೂರಿನಲ್ಲಿ ಉಪ ಮಾರುಕಟ್ಟೆ ತೆರೆಯಲಾಯಿತು. ರೈತರಿಂದ ಖರೀದಿಸಿದ ಬೆಳೆಗಳಿಗೆ ಗೋದಾಮು ಹಾಗೂ ಪ್ರಾಂಗಣವನ್ನು ನಿರ್ಮಿಸಲಾಯಿತು. ಇದರಲ್ಲಿ ಖಾಸಗಿ ವ್ಯಕ್ತಿಗಳು ಹೆಚ್ಚಿನ ಪ್ರಯೋಜನ ಪಡೆದುಕೊಂಡರು. ಆದರೆ ರೈತರ ಬೆಳೆಯನ್ನು ನೇರವಾಗಿ ಮಾರಾಟ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಅಗತ್ಯ ಕ್ರಮ ವಹಿಸಲಿಲ್ಲ.
ಬಳಿಕ 2021ರಲ್ಲಿ ಕೊಳ್ಳೇಗಾಲದಿಂದ ಪ್ರತ್ಯೇಕಗೊಂಡು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯಾಗಿ ಸ್ವಾಯತ್ತೆ ಪಡೆದು ಸಮಿತಿಯನ್ನೂ ರಚಿಸಲಾಯಿತು. ಆದರೂ ಖಾಸಗಿ ವ್ಯಕ್ತಿಗಳು ರೈತರ ಬೆಳೆಗಳನ್ನು ಖರೀದಿಸಿ ಗೋದಾಮುಗಳಲ್ಲಿ ದಾಸ್ತಾನು ಮಾಡುವುದಕ್ಕಷ್ಟೇ ಈ ಮಾರುಕಟ್ಟೆ ಸೀಮಿತವಾಗಿದೆ. ರೈತರ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಈವರೆಗೂ ಸಾಧ್ಯವಾಗದಿರುವುದು ನಿಜಕ್ಕೂ ವಿಪರ್ಯಾಸ.
ಪ್ರಯೋಜನಕ್ಕೆ ಬಾರದ ಮಾರುಕಟ್ಟೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿ ಮಾಡಿರುವಂತೆ ರಾಗಿ ಖರೀದಿಗೆ ಬೆಂಬಲ ಬೆಲೆ ನೀಡಲಾಗುತ್ತಿದೆ. ಆದರೆ ಇತರ ಉತ್ಪನ್ನಗಳನ್ನು ಖರೀದಿಸುತ್ತಿಲ್ಲ. ಇದರಿಂದ ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸದ ಪರಿಣಾಮ ಮುಸುಕಿನ ಜೋಳ, ಅರಿಸಿಣ, ಇತರ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಹಾಗಾಗಿ ರೈತರು ಬೆಳೆಗಳನ್ನು ಗ್ರಾಮಗಳಲ್ಲಿಯೇ ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ತಾಲೂಕಿನ ರೈತರಿಗೆ ಅನುಕೂಲವಾಗಬೇಕಿದ್ದ ಈ ಮಾರುಕಟ್ಟೆ ಇದ್ದೂ ಇಲ್ಲದಂತಾಗಿದೆ. ಈ ಸಂಬಂಧ ಹಲವು ವರ್ಷಗಳಿಂದಲೂ ರೈತರಿಂದ ಆಕ್ಷೇಪವ್ಯಕ್ತವಾಗುತ್ತಿದೆ. ಈ ಬಗ್ಗೆ ಸಂಬಂಧಟ್ಟ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಗೆ ತಿಳಿದಿದೆಯಾದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ.
ತಾಲೂಕಿನ ತರಕಾರಿ ತಮಿಳುನಾಡಿನಲ್ಲಿ ಮಾರಾಟ: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ, ಬೀನ್ಸ್, ಕ್ಯಾರೆಟ್, ಎಲೆಕೋಸು ಹಾಗೂ ಇತರ ತರಕಾರಿ ಬೆಳೆಯುತ್ತಾರೆ. ಆದರೆ ತಾಲೂಕಿನಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿನ ರೈತರು ತರಕಾರಿಯನ್ನು ತಮಿಳುನಾಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಾಗಿದೆ. ಇದು ಅಧಿಕಾರಿಗಳ ನಿರ್ಲಕ್ಷವನ್ನು ಎತ್ತಿ ಹಿಡಿಯುತ್ತದೆ.
ಕುಡುಕರ ತಾಣ: ಗೋದಾಮುಗಳು ದಾಸ್ತಾನಿಗಷ್ಟೇ ಸೀಮಿತವಾಗಿದ್ದು, ರೈತರಿಗಾಗಿ ನಿರ್ಮಿಸಿರುವ ಪ್ರಾಂಗಣದಲ್ಲಿ ಕೆಲವೊಂದು ದಿನಗಳಲ್ಲಿ ಸಂಘ, ಸಂಸ್ಥೆಗಳ ಸಭೆ, ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ. ಇನ್ನು ಜನರ ಸಂಚಾರ ಹಾಗೂ ಭದ್ರತಾ ಸಿಬ್ಬಂದಿ ಇಲ್ಲದ ಈ ಮಾರುಕಟ್ಟೆಯ ವಿಶಾಲ ಆವರಣದಲ್ಲಿ ಸಂಜೆಯಾಗುತ್ತಿದ್ದಂತೆ ಕೆಲವರು ಕುಡುಕರ ಅಡ್ಡೆಯಾಗುತ್ತಿದೆ. ಬೀಡಿ, ಸಿಗರೇಟು, ಮದ್ಯದ ಖಾಲಿ ಪೌಚ್, ಪ್ಲಾಸ್ಟಿಕ್ ಲೋಟ ಹಾಗೂ ಬಾಟಲಿಯನ್ನು ಅಲ್ಲಲ್ಲಿ ಬಿಸಾಡಲಾಗಿದೆ.
ಮನೆ ಮಾಡಿರುವ ಅನೈರ್ಮಲ್ಯ: ಸೂಕ್ತ ನಿರ್ವಹಣೆ ಇಲ್ಲದ ಪರಿಣಾಮ ಮಾರುಕಟ್ಟೆಯ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು ಹಾವು, ಚೇಳುಗಳ ಅವಾಸ ಸ್ಥಾನವಾಗಿರುವುದು ಒಂದೆಡೆಯಾದರೆ ಚರಂಡಿಯಲ್ಲಿ ಕೊಳಚೆ ನೀರಿನ ಜತೆಗೆ ಮದ್ಯದ ಖಾಲಿ ಪೌಚ್ ಹಾಗೂ ತ್ಯಾಜ್ಯಗಳು ತುಂಬಿ ತುಳುಕುತ್ತಿದೆ. ಇದರಿಂದ ಮಾರುಕಟ್ಟೆಯ ಆವರಣದಲ್ಲಿ ಅನೈರ್ಮಲ್ಯ ಮನೆ ಮಾಡಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು. ಜತೆಗೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇದೆ. ಆದರೆ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲ. ಇದರಿಂದ ರೈತರು ಮಧ್ಯವರ್ತಿಗಳಿಗೆ ಮಾರಾಟ ಮಾಡಬೇಕಾದ ಸ್ಥಿತಿ ಇದೆ. ಹಾಗಾಗಿ ಮಾರುಕಟ್ಟೆ ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಕೊಡಬೇಕು.
ಅಮ್ಜಾದ್‌ಖಾನ್ ಅಧ್ಯಕ್ಷ, ರೈತ ಸಂಘ, ಹನೂರು
ಲೊಕ್ಕನಹಳ್ಳಿ ಭಾಗದಲ್ಲಿ ಹೆಚ್ಚು ತರಕಾರಿ ಬೆಳೆಯುತ್ತಾರೆ. ಆದರೆ ತಾಲೂಕಿನಲ್ಲಿ ಸೂಕ್ತ ಮಾರುಕಟ್ಟೆ ಇಲ್ಲದ ಪರಿಣಾಮ ಇಲ್ಲಿನ ರೈತರು ತರಕಾರಿಯನ್ನು ತಮಿಳುನಾಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.
ಜಗದೀಶ್ ಲೊಕ್ಕನಹಳ್ಳಿ ಗ್ರಾಮಸ್ಥ
ರೈತರಿಂದ ಖರೀದಿಸಿದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಯ 28 ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗಿದ್ದು, ಆದಾಯವೂ ಬರುತ್ತಿದೆ. ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಇತರ ಬೆಳೆಗಳನ್ನು ರೈತರು ನೇರವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಂತೆ ಆರಂಭಿಸಲು ಪ್ರಚಾರ ಮಾಡಲಾಗಿತ್ತು. ಆದರೆ ರೈತರು ಬರಲಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಗತ್ಯ ಕ್ರಮವಹಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ಜತೆಗೆ ಸ್ವಚ್ಛತೆ ಹಾಗೂ ನಿರ್ವಹಣೆಗೆ ಒತ್ತು ನೀಡಲಾಗುವುದು.
ನಾಗೇಶ್ ಕಾರ್ಯದರ್ಶಿ, ಎಪಿಎಂಸಿ ಹನೂರು