

ಶನಿವಾರಸಂತೆ: ಗುತ್ತಿಗೆದಾರ ಕಡೆಯವರಿಂದ ಬುಧವಾರ ಲಂಚ ಸ್ವೀಕರಿಸುತ್ತಿದ್ದ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗುತ್ತಿಗೆದಾರರಿಗೆ ಬಿಲ್ ಪಾಸ್ ಮಾಡಿಕೊಡಲು 25 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಗ್ರಾಪಂ ಅಧ್ಯಕ್ಷೆ ಸುಧಾ ಈರೇಶ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಗ್ರಾಮದ ಗುತ್ತಿಗೆದಾರ ಹಮೀದ್ ಅವರಿಗೆ 14.70 ಲಕ್ಷ ರೂ. ಕಾಮಗಾರಿಯ ಬಿಲ್‌ಪಾಸ್ ಮಾಡಲು ಅಧ್ಯಕ್ಷೆ ಸುಧಾ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಮೀದ್ ಅವರ ಗುತ್ತಿಗೆ ಕೆಲಸ ನೋಡಿಕೊಳ್ಳುತ್ತಿದ್ದ ಭರತ್ ಅವರಿಂದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ 25 ಸಾವಿರ ರೂ. ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಅಧ್ಯಕ್ಷೆಯನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಲೋಕೇಶ್, ವೀಣಾ ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.