ಮಾದಪ್ಪನ ಹುಂಡಿಯಲ್ಲಿ 2.85 ಕೋಟಿ ರೂ. ಸಂಗ್ರಹ

12 HANUR 8 .. HUNDI
Published on

 27 ಗ್ರಾಂ ಚಿನ್ನ, 1 ಕೆಜಿ 800 ಗ್ರಾಂ ಬೆಳ್ಳಿ ಆಭರಣ ಭಕ್ತರಿಂದ ಅರ್ಪಣೆ

 ಹನೂರು : ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಎಣಿಕೆಯಲ್ಲಿ 2.85 ಕೋಟಿ ರೂ ಸಂಗ್ರಹವಾಗಿದೆ. ಕಳೆದ 20 ದಿನದ ಅವಧಿಯಲ್ಲಿ ಸಂಗ್ರಹವಾದ ಹುಂಡಿಗಳನ್ನು ಬುಧವಾರ ಬೆಳಗ್ಗೆ ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖ ತೆರೆಯಲಾಯಿತು. ಸಂಗ್ರಹವಾಗಿದ್ದ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಚೀಲದಲ್ಲಿರಿಸಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ವಿಶಾಲ ಕೊಠಡಿಗೆ ರವಾನಿಸಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಎಣಿಕೆ ಆರಂಭಿಸಿ ರಾತ್ರಿ 8 ಪೂರ್ಣಗೊಳಿಸಲಾಯಿತು.

ಈ ಬಾರಿ 5 ದಿನಗಳ ಕಾಲ ಜರುಗಿದ ಮಹಾ ಶಿವರಾತ್ರಿ ಜಾತ್ರೆಗೆ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಭೇಟಿ ನೀಡಿದ್ದರು. ಸರ್ಕಾರಿ ರಜೆ ದಿನಗಳಂದೂ ಹೆಚ್ಚಿನ ಭಕ್ತರು ಆಗಮಿಸಿದ್ದರು. ಇದರಲ್ಲಿ ಹರಕೆ ಹೊತ್ತ ಭಕ್ತರು ದೇಗುಲ ಸೇರಿದಂತೆ ವಿವಿಧೆಡೆಯಲ್ಲಿ ಇರಿಸಿದ್ದ ಹುಂಡಿಗಳಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿ ಆಭರಣ ಹಾಕಿದ್ದರು. ಇ- ಹುಂಡಿ ಮೂಲಕವೂ ನಿಧಿ ಸಂಗ್ರಹವಾಗಿತ್ತು.

ಹುಂಡಿ ಎಣಿಕೆಯಲ್ಲಿ ಒಟ್ಟು 2,85,69,937 ರೂ ನಗದು, 27 ಗ್ರಾಂ ಚಿನ್ನ ಹಾಗೂ 1 ಕೆಜಿ 800 ಗ್ರಾಂ ಬೆಳ್ಳಿ ಆಭರಣ ಸಂಗ್ರಹವಾಗಿದೆ. ಕಳೆದ ಬಾರಿ ಫೆ. 20 ರಂದು ನಡೆದ ಹುಂಡಿ ಎಣಿಕೆಯಲ್ಲಿ 28 ದಿನದ ಅವಧಿಗೆ 1,94,49,243 ರೂ. ನಗದು, 63.06 ಗ್ರಾಂ ಚಿನ್ನ ಹಾಗೂ 1 ಕೆ.ಜಿ. 510 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ಈ ಸಂದರ್ಭ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಜಿ.ಎಲ್. ಚಂದ್ರಶೇಖರ್, ಲೆಕ್ಕಾಧೀಕ್ಷಕ ಗುರುಮಲ್ಲಯ್ಯ, ನಾಮ ನಿರ್ದೇಶಿತ ಸದಸ್ಯರಾದ ಗಂಗನ ತಿಮ್ಮಯ್ಯ, ಭಾಗ್ಯಮ್ಮ, ಮಹದೇವಪ್ಪ, ಮರಿಸ್ವಾಮಿ, ಜಿಲ್ಲಾಧಿಕಾರಿ ಕಚೇರಿಯ ಹರೀಶ್‌ಕುಮಾರ್ ಕೊಳ್ಳೇಗಾಲ ಬ್ಯಾಂಕ್ ಆಫ್ ಬರೋಡ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net