ರೋಗ ಪರಿಹರಿಸುವ ದೈವ ಹುಣಸನಾಳಯ್ಯ

HUNASANALAIH SWAMY IDOL
Published on

ಶಿವು ಹುಣಸೂರು : ಶಿವನ ಮತ್ತೊಂದು ಅವತಾರ ಅಶ್ವಾರೂಢ ಹುಣಸನಾಳಯ್ಯ ಸ್ವಾಮಿ ಭಕ್ತರ ರಕ್ಷಕನಾಗಿದ್ದಾನೆ. ಹುಣಸೂರು ನಗರದ ಕಲ್ಕುಣಿಕೆ ರಂಗನಾಥ ಕೊಪ್ಪಲು ಗ್ರಾಮದಲ್ಲಿ ಈತ ನೆಲೆನಿಂತಿದ್ದಾನೆ. ಗ್ರಾಮದ ಜನರ ರೋಗ, ರುಜಿನಗಳನ್ನು ದೂರ ಮಾಡುವ ಈತ ಆರೋಗ್ಯ ಪಾಲಿಸುವ ಧನ್ವಂತರಿಯ ಸ್ವರೂಪನಾಗಿದ್ದಾನೆ. ಜನರಿಗೆ ಕಾಡುವ ಮಾರಿ-ಮಲೆಗಳ ಭೀತಿಯನ್ನು ತೊಲಗಿಸುವ ದೈವವಾಗಿ ಶತ ಶತಮಾನಗಳಿಂದ ಈ ಕ್ಷೇತ್ರದಲ್ಲಿ ನೆಲೆಯೂರಿದ್ದಾನೆ. ಹುಣಸನಾಳಯ್ಯ ಸ್ವಾಮಿ ಲೀಲೆಗಳು ಇಂದಿಗೂ ಜನ ಮಾನಸದಲ್ಲಿ ಜೀವಂತವಾಗಿವೆ. ದೇವರ ಮಹಿಮೆ ದಶ ದಿಕ್ಕುಗಳಲ್ಲೂ ಪ್ರಸಿದ್ಧಿ ಪಡೆದಿದೆ. ಹಲವು ಹಿರಿಯರ ಮನದಲ್ಲಿ ದೇವರ ಕೃಪಾ ಕಟಾಕ್ಷ ಮತ್ತು ಮಹಿಮೆ ನೆಲೆಸಿದೆ. ಹಲವರಿಗೆ ಕ್ಷೇತ್ರದಿಂದ ಕಷ್ಟ- ಕಾರ್ಪಣ್ಯಗಳೂ ನಿವಾರಣೆಯಾದ ನಿದರ್ಶನಗಳಿವೆ.

ಮೂಲತಃ ಪಿರಿಯಾಪಟ್ಟಣ ತಾಲೂಕು ಕಪ್ಪಡಿಯ ವೀರಭದ್ರಸ್ವಾಮಿ ದೇಗುಲದ ಭಕ್ತ ಸಮೂಹ ದಿಂದ ಹುಣಸೂರಿನ ಕಲ್ಕುಣಿಕೆ ಬಡಾವಣೆಯ ರಂಗನಾಥ ಕೊಪ್ಪಲು ಗ್ರಾಮದಲ್ಲಿ ನಾಲ್ಕು ತಲೆ ಮಾರುಗಳ ಹಿಂದೆ ಹುಣಸನಾಳಯ್ಯ ನೆಲಯೂರಿದ ಎನ್ನುತ್ತಾರೆ ಹಿರಿಯರು. ದೇವರು ಗದ್ದಿಗೆಯಲ್ಲಿ ಐಕ್ಯವಾಗಿರುವ ಕುರಿತು ಗ್ರಾಮದ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಭಕ್ತಜನ ಪ್ರಿಯನಾದ ಹುಣಸ ನಾಳಯ್ಯನ ರೂಪದಲ್ಲಿ ಇಲ್ಲಿ ದೈವ ಸನ್ನಿಧಿ ನೆಲೆ ನಿಂತ ನಂತರ ಈ ಊರಿಗೆ ಹುಣಸೂರು ಎಂಬ ಹೆಸರು ಬಂದಿದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.

ಕಪ್ಪಡಿಗೂ ನಂಟಿದೆ: ಹಳೇ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬಹುತೇಕ ಮನೆ-ಮನಗಳ ದೇವರಾಗಿರುವ ಶ್ರೀ ಮಂಟೆಲಿಂಗಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ದೇವರುಗಳ ನಂಟು ಹುಣಸನಾಳಯ್ಯಸ್ವಾಮಿಗೂ ಇದೆ ಎನ್ನಲಾಗಿದೆ. ಕಪ್ಪಡಿಯ ದೇವಾಲಯದಲ್ಲಿ ಹುಣಸನಾಳಯ್ಯಸ್ವಾಮಿಯ ಗುಡಿಯಿರುವುದು ಇದಕ್ಕೆ ಸಾಕ್ಷಿ ಎನ್ನುತ್ತಾರೆ ವೃದ್ಧರು. ಹುಣಸೂರು ನಗರದ ಗ್ರಾಮದೇವರಾದ ಮುನೇಶ್ವರ ಸ್ವಾಮಿಗೂ ಹುಣಸ ನಾಳಯ್ಯಸ್ವಾಮಿಗೂ ಸಹೋದರ ಸಂಬಂಧವಿದೆ ಎನ್ನುತ್ತಾರೆ ಸ್ಥಳೀಯ ಮುಖಂಡ ರಾಜು. ಹುಣಸ ನಾಳಯ್ಯಸ್ವಾಮಿ ನಮ್ಮೆಲ್ಲರ ರಕ್ಷಕನಾಗಿ, ಬದುಕಿನಲ್ಲಿ ಧೈರ್ಯತುಂಬುವ ನಿರಂತರ ಶಕ್ತಿಯಾಗಿದ್ದಾನೆ ಎಂಬುದು ನಗರಸಭೆ ಸದಸ್ಯ ದೇವರಾಜ್ ಅವರ ಅಭಿಮತ.

ಮುನೇಶ್ವರ, ಕನ್ನಂಬಾಡಮ್ಮ ಪೀಠವಿದೆ: ಶ್ರೀ ಹುಣಸನಾಳಯ್ಯಸ್ವಾಮಿ ದೇಗುಲದಲ್ಲಿ ಶ್ರೀ ಮುನೇಶ್ವೆರಸ್ವಾಮಿ ಮತ್ತು ಶ್ರೀ ಕನ್ನಂಬಾಡಮ್ಮ ದೇವರ ಪೀಠಗಳೂ ಇವೆ. ಪ್ರತಿ ಸೋಮವಾರ ಮತ್ತು ಶುಕ್ರವಾರ ದೇಗುಲದಲ್ಲಿ ಅರ್ಚಕ ಉಮಾ ಶಂಕರ್ ನೇತೃತ್ವದಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ. ಮೂರು ತಲೆಮಾರುಗಳಿಂದ ಸ್ವಾಮಿಯ ಸೇವೆ ನಡೆಸುತ್ತಿದ್ದು ನಮಗೆ, ನಮ್ಮ ಕುಟುಂಬಕ್ಕೆ ನೆಮ್ಮದಿ, ಸಂತೋಷವನ್ನು ಸ್ವಾಮಿ ನೀಡಿದ್ದಾನೆಂದು ಉಮಾಶಂಕರ್ ಧನ್ಯತೆಯಿಂದಲೇ ಹೇಳುತ್ತಾರೆ. ಇದೀಗ ಡಿಸೆಂಬರ್ ಮತ್ತು ಜನವರಿ ಅವಧಿಯಲ್ಲಿ ಅಯ್ಯಪ್ಪಸ್ವಾಮಿ ಭಕ್ತರು, ಮಾಲೆ ಹಾಕುವವರು ಹೆಚ್ಚಾಗಿ ಇರುವ ಕಾರಣ ದೇಗುಲದ ಆವರಣದಲ್ಲಿ ನಿತ್ಯವೂ ಅಯ್ಯಪ್ಪ ಸ್ವಾಮಿ ಭಜನೆ, ಪೂಜೆಗಳನ್ನು ನೆರವೇರಿಸಲಾಗುತ್ತಿದೆ. ವಿವಿಧ ವರ್ಗ ಮತ್ತು ಸಮುದಾಯದ ಭಕ್ತರು ಇಲ್ಲಿ ಸಮಾಗಮಗೊಳ್ಳುತ್ತಿರುವುದು ಧರ್ಮ ಜಾಗೃತಿಗೆ ಪೂರಕವಾಗಿದೆ.

 ಪ್ರವೇಶ ದ್ವಾರದಲ್ಲೇ ಮಹಿಳೆಯರ ಪ್ರಾರ್ಥನೆ

ಈ ದೇಗುಲದ ಒಳಗೆ ಇಂದಿಗೂ ಮಹಿಳೆಯರಿಗೆ ಪ್ರವೇಶವಿಲ್ಲ. ಈ ಸಂಪ್ರದಾಯ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ದೇವಾಲಯದ ಪ್ರವೇಶ ದ್ವಾರದಲ್ಲೇ ನಿಂತು ಮಹಿಳೆಯರು ಸ್ವಾಮಿಗೆ ಕೈಮುಗಿದು, ಪ್ರಾರ್ಥನೆ ಸಲ್ಲಿಸಿ ಹೋಗುವ ಕ್ರಮ ಇಂದಿಗೂ ಜಾರಿಯಲ್ಲಿದೆ. ಹುಣಸ ನಾಳಯ್ಯಸ್ವಾಮಿ ಅಷ್ಟು ಕಟ್ಟುನಿಟ್ಟಿನ, ನೀತಿ -ನಿಯಮಗಳ ಪಾಲಕ ಎಂದು ಗ್ರಾಮದ ಯಜಮಾನ ಜಯರಾಮ್ ತಿಳಿಸುತ್ತಾರೆ. 40-50ವರ್ಷಗಳ ಹಿಂದೆ ಹುಣಸೂರು ಕಾಲರಾ ರೋಗಕ್ಕೆ ತುತ್ತಾಗಿತ್ತು. ಅಂತಹ ಸಂದರ್ಭದಲ್ಲಿ ಭಕ್ತರು ಈ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಗುಣಮುಖ ರಾಗಿರುವ ಉದಾಹರಣೆ ಹಲವಾರು ಇತ್ತು. ಇಡೀ ಊರಿಗೆ ಮಾರಿ- ಮಸಣಿಯಂತಹ ಕೇಡುಗಳು ಸಂಭವಿಸಿದ್ದ ಸಂದರ್ಭ ಪುರಜನರ ರಕ್ಷಣೆಗೆ ಹುಣಸನಾಳಯ್ಯ ಕೃಪೆ ಮಾಡಿದ್ದ. ಸಕಲ ಜನರನ್ನೂ ಕಾಪಾಡಿದ್ದ ಎಂದು ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಹರಕೆ, ಬೇಡಿಕೆಗೆ ಅಸ್ತು ಎನ್ನುವ ಸ್ವಾಮಿ

ಕಷ್ಟ ಎಂದು ಬಂದವರನ್ನು ಕೈ ಹಿಡಿದು ಕಾಪಾಡುವುದು, ಸಮಸ್ಯೆ ಪರಿಹರಿಸುವುದರಲ್ಲಿ ಊರಿನ ಪ್ರಥಮ ದೈವ ಸನ್ನಿಧಿಯೇ ಹುಣಸ ನಾಳಯ್ಯಸ್ವಾಮಿ ದೇಗುಲ. ವಿವಾಹ, ಸಂತಾನ, ಭೂ ವ್ಯಾಜ್ಯ, ಮಾನಸಿಕ ತೊಳಲಾಟ, ವಿದ್ಯಾಪ್ರಾಪ್ತಿ, ಉದ್ಯೋಗ ದೊರಕುವುದು-ಹೀಗೆ ಎಲ್ಲಕ್ಕೂ ಸ್ವಾಮಿಯಿಂದ ಪರಿಹಾರ ಸಿಗುತ್ತದೆ. ಮತ್ತೊಂದು ವಿಶೇಷವೆಂದರೆ ಈತ ರಾಜಕಾರಣಿಗಳ ಪ್ರೀತಿಯ ದೇವರೂ ಹೌದು. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಸ್ವಾಮಿ ಸನ್ನಿಧಿಗೆ ಬಂದು ಗೆಲುವಿಗಾಗಿ ಬೇಡಿಕೆಯಿಡುತ್ತಾರೆ. ಇಷ್ಟಾರ್ಥ ಫಲಿಸಿದಲ್ಲಿ ಹರಕೆ ತೀರಿಸುವ ಸಂಪ್ರದಾಯವೂ ಇದೆ.

ಯುಗಾದಿಯ ನಂತರ ವಿಜೃಂಭಣೆಯ ಉತ್ಸವ

ಪ್ರತಿವರ್ಷ ಯುಗಾದಿ ಹಬ್ಬವಾದ 9 ದಿನಗಳ ನಂತರ ಹುಣಸನಾಳಯ್ಯಸ್ವಾಮಿ ಉತ್ಸವವನ್ನು ಗ್ರಾಮದ ಮತ್ತು ಈ ಭಾಗದ ಎಲ್ಲ ಜನರು ಸಂಭ್ರಮ ಸಡಗರಿಂದ ಆಚರಿಸುತ್ತಾರೆ. ಉತ್ಸವದ ದಿನ ಕುದುರೆಯಮೇಲೆ ಕುಳಿತ ದೇವರ ವಿಗ್ರಹವನ್ನು ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿ ಪುರೋಹಿತರ ಸಮಕ್ಷಮದಲ್ಲಿ ಕರೆತರಲಾಗುತ್ತದೆ. ವಿಶೇಷ ಪೂಜಾ ಕೈಂಕರ್ಯಗಳು, ಹೋಮ- ಹವನಗಳನ್ನು ನಡೆಸಿದ ನಂತರ ಪೂರ್ಣಕುಂಭದೊಂದಿಗೆ ದೇವರನ್ನು ಕರೆತರಲಾಗುತ್ತದೆ. ಈ ಸಂದರ್ಭ ಮಂಗಳ ವಾದ್ಯ, ಜಾನಪದ ಕಲಾತಂಡ ಮೆರುಗು ಗಮನ ಸೆಳೆಯುತ್ತದೆ. ಗ್ರಾಮದ ಪ್ರಮುಖ ರಸ್ತೆಯಲ್ಲಿ ಬೃಹತ್ ಮೆರವಣಿಗೆ ಮೂಲಕ ದೇವರನ್ನು ಕರೆತರುವುದು ಪ್ರತಿ ವರ್ಷದ ಸಂಪ್ರದಾಯವಾಗಿದೆ. ಪ್ರತಿ ಮನೆಮನೆಯ ಬಾಗಿಲಿನಲ್ಲಿ ದೇವರಿಗೆ ಜನರು ಹೂವು, ಹಣ್ಣು, ಜವನ ನೀಡಿ, ಮಂಗಳಾರತಿ ಸಮರ್ಪಿಸಿ ಪೂಜೆಸಲ್ಲಿಸಿ ಧನ್ಯತೆ ಮೆರೆಯುತ್ತಾರೆ. ಈ ಉತ್ಸವ ನೋಡುವುದೇ ಕಣ್ಣಿಗೆ ಆನಂದ ನೀಡುತ್ತದೆ. ಪರ ಊರಿನಿಂದ ನೆಂಟರು, ಬಂಧುಗಳೂ ಆಗಮಿಸಿ ಪೂಜಾದಿಗಳನ್ನು ಸಂಭ್ರಮಿಸುತ್ತಾರೆ. ದೇವರ ದರ್ಶನ ಪಡೆದು ನಿರಾಳರಾಗುತ್ತಾರೆ. ಬದುಕಿನ ಸಂಕಷ್ಟಗಳನ್ನು ಈ ದೇವರು ಪರಿಹರಿಸುತ್ತಾನೆ ಎಂಬ ನಂಬಿಕೆ ಮತ್ತು ಧೈರ್ಯದಿಂದಲೇ ತಮ್ಮ ತಮ್ಮ ಊರುಗಳಿಗೆ ತೆರಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net