

ಹುಣಸೂರು : ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ಅಭಿಪ್ರಾಯಪಟ್ಟರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಕ್ಕಳ ಹಕ್ಕುಗಳು ಮತ್ತು ಕಾಯ್ದೆ ಕುರಿತು ಮುಖ್ಯಶಿಕ್ಷಕರು ಮತ್ತು ಪಿಡಿಒಗಳಿಗೆ ಆಯೋಜಿಸಿದ್ದ ಒಂದು ದಿನದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳೊಂದಿಗೆ ಹೆಚ್ಚು ಕಾಲ ಮತ್ತು ನೇರವಾಗಿ ಸಂಪರ್ಕ ಹೊಂದಿದವರು ಶಿಕ್ಷಕರು. ಅವರ ಮಾತಿನಲ್ಲಿ ಮಕ್ಕಳಿಗೆ ಅತಿ ಹೆಚ್ಚಿನ ವಿಶ್ವಾಸ ಮತ್ತು ನಂಬಿಕೆ ಇರುತ್ತದೆ. ಬಾಲ್ಯ ವಿವಾಹ ನಿಷೇಧ, ಪೊಕ್ಸೋ, ಜೀತ ವಿಮುಕ್ತ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ ಮುಂತಾದವು ಅಗತ್ಯವಾಗಿ ಜಾರಿಗೊಳ್ಳಬೇಕಾದ ಕಾಯ್ದೆಗಳು ಎಂದರು.