

ಹುಣಸೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಜ್ಞಾನನಿಧಿ ಶಿಷ್ಯವೇತನ ಯೋಜನೆಯಡಿ 96ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ನಗರದ ಗುರುಭವನದಲ್ಲಿ ಆಯೋಜಿಸಿದ್ದ ಕಾರ್ಕ್ರಮದಲ್ಲಿ ಮಾತನಾಡಿದ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ್ ನೆಲ್ಲಿತ್ತಾಯ, ವಿದ್ಯಾರ್ಥಿಗಳಿಗೆ ತಂದೆ, ತಾಯಂದಿರು ಎರಡು ಕಣ್ಣುಗಳಿದ್ದಂತೆ. ನಮ್ಮ ಸುತ್ತಮುತ್ತಲ ಇರುವ ಪ್ರಾಣಿ, ಪಕ್ಷಿಗಳನ್ನು ನೋಡಿ ನಾವು ಸಭ್ಯತೆ, ಸನ್ನಡತೆಯನ್ನು ಕಲಿಯಬೇಕು. ಕೋಳಿ ಯಾವ ಹಮ್ಮುಬಿಮ್ಮು ಇಲ್ಲದೇ ಬೆಳಗ್ಗೆ ಕೂಗುವ ಮೂಲಕ ಎಲ್ಲರನ್ನು ಎಚ್ಚರಿಸುತ್ತದೆ. ನಾಯಿ ನಿಯತ್ತಿಗೆ ಉದಾಹರಣೆಯಾದ ಪ್ರಾಣಿ. ಕಾಗೆ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ತೋರಿಸುತ್ತದೆ. ವಿದ್ಯಾರ್ಥಿಗಳಿಗೆ ಮನೆಯಿಂದಲೇ ಸಂಸ್ಕೃತಿ, ಸನ್ನಡತೆ ಕಲಿಸಬೇಕು. ಪೊಲೀಸ್ ಠಾಣೆಯಿಂದಲ್ಲ ಎನ್ನುವುದನ್ನು ನಾವೆಲ್ಲರೂ ಆರಿಯಬೇಕು ಎಂದು ಕಿವಿಮಾತು ಹೇಳಿದರು.
ಶಿಷ್ಯವೇತನ ಮಂಜೂರಾತಿ ಪತ್ರವನ್ನು ತಹಸೀಲ್ದಾರ್ ಮಂಜುನಾಥ್ ವಿದ್ಯಾರ್ಥಿಗಳಿಗೆ ವಿತರಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಪ್ರಸನ್ನ ಬಿಳಿಕೆರೆ, ದಾ.ರಾ.ಮಹೇಶ್, ನೇರಳಕುಪ್ಪೆ ಮಹದೇವ್, ರವಿ ಮನುಗನಹಳ್ಳಿ ಹಾಜರಿದ್ದರು.