

ಪಿರಿಯಾಪಟ್ಟಣ: ತಾಲೂಕಿನ ಹುಣಸೇಕೊಪ್ಪಲು ಗ್ರಾಮದ ಶ್ರೀ ಪ್ಲೇಗಿನಮ್ಮ ತಾಯಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ನ.11 ರಂದು ನಡೆಯಲಿದೆ.
ಅಂದು ಬೆಳಗ್ಗೆ 5 ರಿಂದ 6 ಗಂಟೆ ವರೆಗೆ ಗಂಗಾ ಪೂಜೆ, ದೇವಕಾಯ ಪ್ರವೇಶ, ಗಣಪತಿ ಹೋಮ, ಸಂದಿತ ಕಾಲ ಹೋಮ, ಪೂರ್ಣಾಹುತಿ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಕಳಸ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ನಂತರ ದೇವರಿಗೆ ಪಂಚಾಮೃತ ಅಭಿಷೇಕ, ಮಹಾ ಪೂಜೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪ್ರಸಾದ ವಿನಿಯೋಗ ನಡೆಯಲಿದೆ.
ಪೂಜಾ ಕೈಂಕರ್ಯದಲ್ಲಿ ಶಾಸಕ ಕೆ.ಮಹದೇವ್, ಮಾಜಿ ಶಾಸಕ ಕೆ.ವೆಂಕಟೇಶ್, ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ದೇವೇಗೌಡ, ಮುಖಂಡರಾದ ಶಶಿಕಲಾ ಕುಮಾರ್, ಷಣ್ಮುಖ, ನಾಗೇಗೌಡ, ಶಿವೇಗೌಡ, ಡಿ.ಜಗದೀಶ್ ಇತರರು ಭಾಗವಹಿಸಲಿದ್ದಾರೆ. ವಿಗ್ರಹ ಪ್ರತಿಷ್ಠಾಪನಾ ಪೂಜಾ ಕೈಂಕರ್ಯ ಈಗಾಗಲೇ ಆರಂಭವಾಗಿದ್ದು, ಗುರುವಾರ ರಾಮನಾಥಪುರದ ಕಾವೇರಿ ನದಿಯಲ್ಲಿ ದೇವರಿಗೆ ಪುಣ್ಯಾರ್ಪಣೆ ಕಂಕಣಧಾರಣೆ, ಪೂಜೆ, ಹೋಮ-ಹವನಾದಿಗಳನ್ನು ಮಾಡಲಾಯಿತು.
ಬಳಿಕ ಹುಣಸೇಕೊಪ್ಪಲು ಗ್ರಾಮದಲ್ಲಿ ಶ್ರೀ ಪ್ಲೇಗಿನಮ್ಮ ತಾಯಿನ್ನು ಮೆರವಣಿಗೆ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.