ಸ್ವಾಧೀನವಾದ ಭೂಮಿಗೆ ಹೆಚ್ಚುವರಿ ಪರಿಹಾರಕ್ಕೆ ಹುನ್ನಾರ

ಸ್ವಾಧೀನವಾದ ಭೂಮಿಗೆ ಹೆಚ್ಚುವರಿ ಪರಿಹಾರಕ್ಕೆ ಹುನ್ನಾರ
Published on

ಹಾಸನ: ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯ ಯೋಜನೆ ಕಾಮಗಾರಿಗಳಿಗೆ ಸ್ವಾಧೀನವಾದ ಭೂಮಿಗೆ ಹೆಚ್ಚುವರಿ ಪರಿಹಾರ ಪಡೆಯುವ ಹುನ್ನಾರ ನಡೆಯುತ್ತಿದ್ದು, ಸರ್ಕಾರ ಕೂಡಲೇ ಎಚ್ಚೆತ್ತು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಇಲ್ಲದಿದ್ದರೆ ಸಾವಿರಾರು ಕೋಟಿ ರೂ. ನಷ್ಟವಾಗಲಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1986ರಲ್ಲಿ ಸ್ವಾಧೀನಪಡಿಸಿದ 1 ಎಕರೆ ಭೂಮಿಗೆ 3-5 ಸಾವಿರ ರೂ. ಪರಿಹಾರ ನಿಗದಿಪಡಿಸಲಾಗಿತ್ತು. ಇದನ್ನು ಒಪ್ಪದ ಅರ್ಜಿದಾರರು ತಾಲೂಕು ಕೋರ್ಟ್ ಮೊರೆ ಹೋಗಿದ್ದರು. 2004-05ರ ಅವಧಿಯಲ್ಲಿ ಹಲವು ಪ್ರಕರಣ ಇತ್ಯರ್ಥ ಆಗಿ, ಪರಿಹಾರ ಮೊತ್ತವನ್ನು 1 ಎಕರೆಗೆ 29,500ದಿಂದ 30 ಸಾವಿರಕ್ಕೆ ಏರಿಕೆ ಮಾಡಿತ್ತು. ಈ ನಡುವೆ 20 ವರ್ಷ ಹಿಂದೆ ನ್ಯಾಯಾಲಯಗಳಲ್ಲಿ ತೀರ್ಮಾನವಾಗಿರುವ ಭೂ ಸ್ವಾಧೀನ ಪ್ರಕರಣಗಳನ್ನು ಹಿಡಿದುಕೊಂಡು ಜಿಲ್ಲಾ ಕೋರ್ಟ್ ಮೊರೆ ಹೋಗಿದ್ದಾರೆ ಎಂದರು.

ಆದರೆ ಹೈಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ 5 ವರ್ಷ ವಿಳಂಬವನ್ನು ಮಾನ್ಯ ಮಾಡದೆ ವಜಾ ಮಾಡಿದೆ. ಇದನ್ನು ಜಿಲ್ಲಾ ನ್ಯಾಯಾಲಯದ ಗಮನಕ್ಕೆ ತಂದಿದ್ದರೂ ಅಪೀಲುದಾರರ 18-20 ವರ್ಷಗಳ ವಿಳಂಬವನ್ನು ಮನ್ನಾ ಮಾಡಿ 1 ಎಕರೆ ಜಮೀನಿಗೆ 12 ಲಕ್ಷ ರೂ. ನಿಗದಿಪಡಿಸಲಾಗಿದೆ. ಆದರೆ ಶಾಸನ ಬದ್ಧ ಸವಲತ್ತುಗಳನ್ನು ಲೆಕ್ಕಾಚಾರ ಮಾಡಿದರೆ 1 ಎಕರೆಗೆ ಕನಿಷ್ಠ 80 ಲಕ್ಷದಿಂದ 1 ಕೋಟಿ ಹಣವನ್ನು ಕಾವೇರಿ ನಿಗಮ ಭರಿಸಬೇಕಾಗುತ್ತದೆ. ವಿಪರ‌್ಯಾಸವೆಂದರೆ ಇಷ್ಟೆಲ್ಲ ನಷ್ಟದ ಆತಂಕ ಇದ್ದರೂ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಸಾವಿರಾರು ಕೋಟಿ ರೂ. ದೊಡ್ಡ ಅಕ್ರಮದಲ್ಲಿ ವಿಶೇಷ ಭೂ ಸ್ವಾದೀನ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಇದನ್ನು ತಡೆಯಲು ಸರ್ಕಾರಿ ವಕೀಲರೂ ವಿಫಲರಾಗಿದ್ದಾರೆ. ಮೇಲ್ಮಟ್ಟದ ತನಿಖೆ ನಡೆದರೆ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ಬಯಲಾಗಲಿದೆ ಎಂದು ಹೇಳಿದರು.

ಇಂತಹ 600-800 ಭೂ ಸ್ವಾಧೀನ ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನೂ ಇದೇ ರೀತಿ ಆದೇಶ ಮಾಡುವ ಸಾಧ್ಯತೆ ಇದೆ. ಹೀಗಾದರೆ ನಿಗಮವು ಸಾವಿರಾರು ಕೋಟಿ ರೂ. ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಬಾಕಿ ಇರುವ ಅಪೀಲುಗಳ ವಿರುದ್ಧ ಹೈಕೋರ್ಟ್ ತುರ್ತಾಗಿ ಅರ್ಜಿ ಸಲ್ಲಿಸುವಂತೆ ವಕೀಲ ಎಸ್.ಎಚ್.ಮೋಹನ್ ಕುಮಾರ್ ಎಂಬುವರು ಹಿಂದಿನ ಡಿಸಿ ಸತ್ಯಭಾಮಾ ಅವರಿಗೆ ಬರೆದಿರುವ ಪತ್ರ ಆಧರಿಸಿ ಮನವಿ ಮಾಡಿದರು.

ವಕೀಲರ ದೂರು ಆಧರಿಸಿ ಹಿಂದಿನ ಡಿಸಿ ಅವರು, ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಬಿ.ಬಿ.ಕಾವೇರಿ, ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಖ್, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನು ಆಧರಿಸಿ ರಾಜ್ಯ ಸರ್ಕಾರ, ಜಲಸಂಪನ್ಮೂಲ ಸಚಿವರು ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಾಮಾಣಿಕರಿದ್ದು, ಕೂಡಲೇ ಗಮನಹರಿಸಿ ಕಾವೇರಿ ನೀರಾವರಿ ನಿಗಮದ ಮೂಲಕ ಸರ್ಕಾರಕ್ಕೆ ಆಗುವ ನಷ್ಟವನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net