ಅವ್ಯವಸ್ಥೆಯ ಆಗರವಾದ ಹುನಗುಂದ ಪುರಸಭೆ

hnd 7 sabe
ಹುನಗುಂದ ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ಸದಸ್ಯ ಮಹೇಶ ಬೆಳ್ಳಿಹಾಳ ಮಾತನಾಡಿದರು. ಉಪಾಧ್ಯಕ್ಷೆ ರಾಜಮ್ಮ ಬದಾಮಿ, ಪ್ರವೀಣ ಹಳಪೇಟಿ, ಖೈರುನಬಿ ನಾಯಕ ಇತರರಿದ್ದರು.
Published on

ಹುನಗುಂದ: ಪಟ್ಟಣದ ಪುರಸಭೆ ಅವ್ಯವಸ್ಥೆ ಆಗರವಾಗಿದೆ. ಜನರಿಗೆ ಸಮಪರ್ಕವಾಗಿ ಉತಾರ ಸಿಗುತ್ತಿಲ್ಲ. ಅವಶ್ಯಕತೆಗೆ ಅನುಗುಣವಾಗಿ ಅನುದಾನವೂ ಬಳಕೆಯಾಗುತ್ತಿಲ್ಲ ಎಂದು ಬಿಜೆಪಿ ಸದಸ್ಯ ಮಹೇಶ ಬೆಳ್ಳಿಹಾಳ ಆರೋಪಿಸಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಬಡಾವಣೆಯಲ್ಲಿ ಅಗತ್ಯವಾಗಿ ಚರಂಡಿ, ಶೌಚಗೃಹ ಸೇರಿ ಮೂಲ ಸೌಲಭ್ಯ ಒದಗಿಸಬೇಕಿತ್ತು. 15ನೇ ಹಣಕಾಸು ಯೋಜನೆಯಡಿ 35 ಲಕ್ಷ ರೂ. ಅನುದಾನ ಆಶ್ರಯ ಮನೆಗಳಿಗೆ ಬಳಕೆ ಮಾಡಲಾಗಿದೆ. ಅವೈಜ್ಞಾನಿಕವಾಗಿ ಹೊಸ ಲೇಔಟ್‌ಗಳು ನಿರ್ಮಾಣವಾಗಿದ್ದು, ಅಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲ. ಬಹುತೇಕ ವಾರ್ಡ್‌ಗಳ ಉತಾರ ಪೂರೈಕೆ ನಿಲ್ಲಿಸಲಾಗಿದೆ. ಇದರಿಂದ ತಮ್ಮ ಮನೆ ಮತ್ತು ನಿವೇಶನಗಳ ಉತಾರಗಳನ್ನು ಪಡೆಯಲು ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಪುರಸಭೆ ಅಧಿಕಾರಿ ಮತ್ತು ಅಧ್ಯಕ್ಷರ ವಿರುದ್ಧ ಹರಿಹಾಯ್ದರು.

ಪ್ರವೀಣ ಹಳಪೇಟಿ ಮಾತನಾಡಿ, ವಿದ್ಯಾನಗರ ಬಡಾವಣೆಯ ಚರಂಡಿಗಳಲ್ಲಿ ಗಿಡಗಂಟಿಗಳು ಬೆಳೆದು ನೀರು ಸಮರ್ಪಕವಾಗಿ ಮುಂದೆ ಸಾಗುತ್ತಿಲ್ಲ. ಈ ಕುರಿತು ಸಿಬ್ಬಂದಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಪಟ್ಟಣದಲ್ಲಿ 24*7 ಕುಡಿಯುವ ನೀರು ಯೋಜನೆ ಕಾಮಗಾರಿ ನಿಮಿತ್ತ ಬಡಾವಣೆಯಲ್ಲಿ ಗುಂಡಿ ಅಗೆದಿದ್ದು, ಮಣ್ಣು ಹಾಕಿ ಮುಚ್ಚಿಲ್ಲ. ಇದರಿಂದ ಜನತೆಗೆ ಸಂಚರಿಸಲು ತೀವ್ರ ತೊಂದರೆಯಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕೆಂದು ತಿಳಿಸಿದರು.

ಶಾಂತಪ್ಪ ಹೊಸಮನಿ ಮಾತನಾಡಿ, ದಾಖಲೆಗಳ ಪ್ರಕಾರ ಅಧಿಕಾರಿಗಳ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳೂ ನಡೆದರೂ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ಬಂದಿಲ್ಲ. ಪಟ್ಟಣದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕಚೇರಿಯಲ್ಲಿ ಸಿಬ್ಬಂದಿ ಕೊರತೆ ನೆಪದಿಂದ ಯಾವ ಕೆಲಸಗಳೂ ನಡೆಯುತ್ತಿಲ್ಲ ಎಂದರು.

ಖೈರುನಬಿ ನಾಯಕ ಮಾತನಾಡಿ, ವಾರ್ಡ್ 6ರ ಬಡವಾಣೆಯ ಚರಂಡಿಗಳನ್ನು ಸ್ವಚ್ಛಗೊಳಿಸದ್ದರಿಂದ ನಿವಾಸಿಗಳಿಗೆ ಡೆಂೆ ಜ್ವರ ಹರಡಿದೆ. ಕೂಡಲೇ ಫಾಗಿಂಗ್ ಸಿಂಪಡಿಸಬೇಕೆಂದು ಆಗ್ರಹಿಸಿದರು.

ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಮಾತನಾಡಿ, ನನ್ನ ಅಧ್ಯಕ್ಷತೆಯಲ್ಲಿ ಮೊದಲ ಸಭೆ ಆಗಿದ್ದರಿಂದ ಕಚೇರಿ ಎಲ್ಲ ಸಿಬ್ಬಂದಿ ಮತ್ತು ಕಾರ್ಯ ನಿರ್ವಹಿಸುವ ವಿಭಾಗ ಪರಿಶೀಲಿಸುವ ಜತೆಗೆ ನಗರ ಅಭಿವೃದ್ಧಿಗೆ ಸಂಪೂರ್ಣ ತೊಡಗಿಸಿಕೊಳ್ಳುವೆ. ಶಾಸಕರಿಂದ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸುತ್ತೇನೆ. ನಗರದ ಎಲ್ಲ ವಾರ್ಡ್‌ಗಳಲ್ಲಿ ಉತಾರ ಪೂರೈಕೆಯಲ್ಲಿ ಅಡಚಣೆಯಾಗಿದ್ದು, ಶೀಘ್ರ ಉತಾರ ಪೂರೈಸಲಾಗುವುದೆಂದು ತಿಳಿಸಿದರು.

ಉಪಾಧ್ಯಕ್ಷೆ ರಾಜಮ್ಮ ಬದಾಮಿ, ಸದಸ್ಯರಾದ ಶರಣು ಬೆಲ್ಲದ, ಬಸಮ್ಮ ಚಿತ್ತವಾಡಗಿ, ನಾಗರತ್ನ ತಾಳಿಕೋಟೆ, ಬಸವರಾಜ ಬಂಡಿವಡ್ಡರ, ಬಸವರಾಜ ಗೊಣ್ಣಾಗರ, ಮೈನು ಧನ್ನೂರ, ಮಹ್ಮದ್ ಧೋಟಿಹಾಳ, ಶಾಂತಾ ಮೇಲಿನಮನಿ, ಚಂದ್ರಪ್ಪ ತಳವಾರ, ಪರವೇಜ್ ಖಾಜಿ, ಖೈರೂನಬಿ ನಾಯಕ, ಶರಣಮ್ಮ ಮುಕ್ಕಣ್ಣವರ, ಶರಣು ಬೆಲ್ಲದ, ಗುರುಬಾಯಿ ಹೂಗಾರ, ಗಿರಜಮ್ಮ ಮಠ, ಯಲ್ಲಪ್ಪ ನಡುವಿನಮನಿ, ಕಮಲವ್ವ ಸಂದಿಮನಿ, ಶ್ರೀದೇವಿ ಚೂರಿ, ಪುರಸಭೆ ಮ್ಯಾನೇಜರ್ ಎಂ.ಎಂ. ಕಳ್ಳಿಗುಡ್ಡ, ಇಂಜಿನಿಯರ್ ಕೊಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net