ಹುನಗುಂದ ಪುರಸಭೆ ಚುನಾವಣೆ: ಭಾಗ್ಯಶ್ರೀ ಅಧ್ಯಕ್ಷೆ, ರಾಜವ್ವ ಉಪಾಧ್ಯಕ್ಷೆ

Hunagunda Municipal Election Bhagyashree President, Rajvva Vice President
ಹುನಗುಂದ ಪುರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಭಾಗ್ಯಶ್ರೀ ರೇವಡಿ, ರಾಜವ್ವ ಬಾದಾಮಿ ಅವರೊಂದಿಗೆ ಶಾಸಕ ವಿಜಯಾನಂದ ಕಾಶಪ್ಪನವರ, ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
Published on

ಹುನಗುಂದ: ಪಟ್ಟಣದ ಪುರಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಭಾಗ್ಯಶ್ರೀ ಬಸವರಾಜ ರೇವಡಿ ಹಾಗೂ ಉಪಾಧ್ಯಕ್ಷರಾಗಿ ರಾಜವ್ವ ಹನಮಪ್ಪ ಬಾದಾಮಿ ಆಯ್ಕೆಯಾಗಿದ್ದಾರೆ.

ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 24 ಮತಗಳ ಪೈಕಿ ಕಾಂಗ್ರೆಸ್‌ನ ಭಾಗ್ಯಶ್ರೀ ರೇವಡಿ 16 ಮತ ಪಡೆದು ಆಯ್ಕೆಯಾದರು. ಕಾಂಗ್ರೆಸ್‌ನ 12, ಬಿಜೆಪಿಯ ಒಬ್ಬರು, ಜೆಡಿಎಸ್‌ನ ಇಬ್ಬರು ಹಾಗೂ ಶಾಸಕರ ಒಂದು ಮತ ಸೇರಿ ಒಟ್ಟು 16 ಮತಗಳು ಅವರಿಗೆ ಚಲಾವಣೆಯಾದವು. ಬಿಜೆಪಿಯ ಬಸವ್ವ ಬಸಪ್ಪ ಚಿತ್ತಾವಾಡಗಿ 8 ಮತ ಪಡೆದು ಪರಾಭವಗೊಂಡರು. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ರಾಜವ್ವ ಹನುಮಪ್ಪ ಬಾದಾಮಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆ ಅಧಿಕಾರಿಯಾಗಿ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಕಾರ್ಯನಿರ್ವಹಿಸಿದರು.

ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಸಿಹಿ ತಿನ್ನಿಸಿ ಗುಲಾಲು ಎರಚಿ, ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.

ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಪಡೆದಿರುವುದರಿಂದ ಪಟ್ಟಣದ ಮೂಲ ಸೌಕರ್ಯ ಸೇರಿ ಸವಾರ್ಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದಕೊಂಡು ಉತ್ತಮ ಆಡಳಿತ ನಡೆಸಬೇಕೆಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ, ಮಾಜಿ ಅಧ್ಯಕ್ಷ ಶರಣು ಬೆಲ್ಲದ, ಪರವೇಜ್ ಖಾಜಿ, ಗುರುಬಾಯಿ ಹೂಗಾರ, ಶಾಂತಾ ಮೇಲಿನಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net