ರಸ್ತೆ ಮಧ್ಯೆ ಹೊತ್ತಿ ಉರಿದ ಲಾರಿ

Hunagunda, Female Conductor, Information, Missed Disaster, Lorry,
ಬಾಗಲಕೋಟೆ ಜಿಲ್ಲೆ ಹುನಗುಂದ ಹೊರವಲಯದ ರಸ್ತೆಯಲ್ಲಿ ಶುಕ್ರವಾರ ಸಂಜೆ ಲಾರಿಯೊಂದಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹತ್ತಿರುವುದು.
Published on

ಬಾಗಲಕೋಟೆ: ಜಿಲ್ಲೆಯ ಹುನಗುಂದ ಹೊರ ವಲಯದ ರಸ್ತೆ ಮಧ್ಯೆ ಚಲಿಸುತ್ತಿದ್ದ ಲಾರಿ ಇಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಶುಕ್ರವಾರ ಸಂಜೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.

ರಾಯಚೂರು -ಬಾಗಲಕೋಟೆ ಹೆದ್ದಾರಿಯಲ್ಲಿ ತೆರಳುತ್ತಿದ್ದ ಲಾರಿ ಇಂಜಿನ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಲಾರಿ ಹೊತ್ತಿ ಉರಿಯಲು ಆರಂಭಿಸಿದೆ. ಇದೇ ಮಾರ್ಗವಾಗಿ ಬರುತ್ತಿದ್ದ ಬಸ್ ಕಂಡಕ್ಟರ್ ಶರಣಮ್ಮ ಎನ್ನುವವರು, ಲಾರಿಗೆ ಬೆಂಕಿ ಹತ್ತಿರುವುದನ್ನು ಗಮನಿಸಿ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಪೋನ್‌ಮಾಡಿ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಹುನಗುಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ವೇಳೆ ಡೀಸೆಲ್ ಟ್ಯಾಂಕ್‌ಗೆ ತಗುಲಿದ್ದರೆ ಇಡಿ ಲಾರಿ ಭಸ್ಮವಾಗುತ್ತಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.

ಬಾಗಲಕೋಟೆ ಸಿಮೆಂಟ್ ಕಾರ್ಖಾನೆಗೆ ಸೇರಿದ ಲಾರಿ ಎನ್ನಲಾಗಿದೆ. ಕಲ್ಲಿನ ಜಲ್ಲಿ ತುಂಬಿಕೊಂಡು ಬಾಗಲಕೋಟೆ ಮಾರ್ಗವಾಗಿ ಬರುತ್ತಿತ್ತು ಎನ್ನಲಾಗುತ್ತಿದೆ. ಲಾರಿಯ ಕ್ಯಾಬಿನ್ ಹಾಗೂ ಇಂಜಿನ್ ಸುಟ್ಟು ಹೋಗಿದೆ. ಹುನಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net