

ಹುನಗುಂದ: 6 ಮತ್ತು 9ನೇ ತರಗತಿ ಪಠ್ಯಪುಸ್ತಕದಲ್ಲಿ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸಲಾಗಿದ್ದು, ಕೂಡಲೇ ಸರ್ಕಾರ ಪಠ್ಯ ಪುಸ್ತಕದಲ್ಲಿರುವ ಸಂದೇಶಗಳನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿ ಬ್ರಾಹ್ಮಣ ಸಮಾಜದಿಂದ ಗ್ರೇಡ್-2 ತಹಸೀಲ್ದಾರ್ ಎಂ.ಎನ್.ಮಲ್ಲಾರ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಸಮಾಜದ ಮುಖಂಡ ವಿಜಯಕುಮಾರ ಕುಲಕರ್ಣಿ ಮಾತನಾಡಿ, ವೇದಗಳ ಕಾಲದಲ್ಲಿ ಆಚರಿಸುತ್ತಿದ್ದ ಯಜ್ಞ ಮತ್ತು ಯಾಗಾದಿಗಳಲ್ಲಿ ಆಹಾರ ಧಾನ್ಯ, ಹಾಲು, ತುಪ್ಪ, ಹವಿಸ್ಸುವನ್ನು ದಹಿಸುತ್ತಿದ್ದರಿಂದ ಆಹಾರದ ಅಭಾವವು ಸೃಷ್ಟಿ ಆಯಿತು ಎಂದು ಕಪೋಲಕಲ್ಪಿತವಾಗಿ ಉಲ್ಲೇಖಿಸಿ ಸನಾತನ ಸಂಪ್ರದಾಯ ಆಚರಣೆಗೆ ಅವಮಾನ ಮಾಡಲಾಗಿದೆ. ಅಲ್ಲದೆ, ಇದೆಲ್ಲವನ್ನು ಬ್ರಾಹ್ಮಣರೇ ಮಾಡುತ್ತಿದ್ದರೆಂದು ತಪ್ಪು ಅಭಿಪ್ರಾಯ ಮೂಡುವಂತೆ ನಮೂದಿಸಿರುತ್ತಾರೆ. ಇದು ನಮ್ಮ ಸನಾತನ ಧರ್ಮ ಹಾಗೂ ಸಂಪ್ರದಾಯಕ್ಕೆ ಘೋರ ಅಪರಾಧ, ಅಪಮಾನ ಮಾಡಿದಂತಾಗಿದೆ. ರಾಜ್ಯ ಸರ್ಕಾರ ಶಾಲಾ ಪಠ್ಯಪುಸ್ತಕದಲ್ಲಿ ಬ್ರಾಹ್ಮಣರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ವಿಷಯವನ್ನು ಸೇರಿಸಿರುವುದು ಬಹಳ ಅಘಾತಕಾರಿಯಾಗಿದೆ ಹಾಗೂ ಬೆಳೆಯುತ್ತಿರುವ ಮಕ್ಕಳ ಮನಸ್ಸಿನ ಮೇಲೆ ದುಷ್ಟರಿಣಾಮ ಬೀರುವಂತಾಗಿದೆ. ಆದ್ದರಿಂದ ಪಠ್ಯ ಪುಸ್ತಕಗಳಲ್ಲಿನ ಸುಳ್ಳು ಸಂದೇಶಗಳನ್ನು ತೆಗೆದು ಹಾಕಬೇಕು ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ಮತ್ತು ಸರ್ಕಾರಕ್ಕೆ ಮನವಿ ಮಾಡಿದರು.
ಶಿರಸ್ತೆದಾರ್ ಎಂ.ಆರ್. ಹೆಬ್ಬಳ್ಳಿ, ಆರ್.ಎಸ್. ಹಿರೇಮಠ, ಹುನಗುಂದ ಬ್ರಾಹ್ಮಣ ಸಮಾಜದ ಅಧ್ಯಕ್ಷ ನಾರಾಯಣ ಕುಲಕರ್ಣಿ, ಮುಖಂಡರಾದ ಮಾಧವನಂದ ದೇಶಪಾಂಡೆ, ವಿಜಯ ದೇಶಪಾಂಡೆ, ಕಿರಣ ಗುಡ್ಡದ, ಕೇಶವ ಹುನಗುಂದ, ಸಮೀರ ದೇಶಪಾಂಡೆ, ವಿಜಯ ದೇಶಪಾಂಡೆ, ನರಸಿಂಹ ಕಾಳಗಿ, ಶ್ರೀರಾಮ ದೇಸಾಯಿ, ಅಭಿ ಕುಲಕರ್ಣಿ, ಶ್ರೀನಿಧಿ ಪದಕಿ, ಶ್ರೀನಿಧಿ ಕುಲಕರ್ಣಿ, ಆದಿತ್ಯ ಕುಲಕರ್ಣಿ, ತಿರುಮಲ ಕುಲಕರ್ಣಿ ಇತರರಿದ್ದರು.