

ಹುಣಸೂರು : ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಹೆಚ್ಚು ಓದುವ ಮೂಲಕ ಜ್ಞಾನದೊಂದಿಗೆ ಭಾಷಾಭಿಮಾನವನ್ನೂ ಗಳಿಸಬಹುದು ಎಂದು ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಹೇಳಿದರು.
ನಗರದ ಜ್ಞಾನಧಾರ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬೇರೆ ಭಾಷೆಯ ಅನಿವಾರ್ಯತೆ ಮತ್ತು ಆಕರ್ಷಣೆ ಮನುಷ್ಯ ಸಹಜ ಗುಣ. ಅಂದಮಾತ್ರಕ್ಕೆ ಮಾತೃಭಾಷೆಯನ್ನು ಕಡೆಗಣನೆ ಅಥವಾ ಮೆರೆಯಬೇಕೆಂದಿಲ್ಲ. ಕನ್ನಡ ಅತ್ಯಂತ ವೈಶಿಷ್ಟ್ಯಪೂರ್ಣ ಭಾಷೆ. ಅನ್ನಕ್ಕಾಗಿ ಬೇರೆ ಭಾಷೆಯನ್ನು ಅವಲಂವಬಿಸಿದರೂ ನಮ್ಮ ಭಾಷೆಯ ಮೇಲಿನ ಪ್ರೀತಿಯನ್ನು ಉಳಿಸಿಕೊಳ್ಳಬೇಕು ಎಂದವರು ಸಲಹೆ ನೀಡಿದರು. ಬಹು ಮುಖ್ಯವಾಗಿ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯಲೋಕದ ಪರಿಚಯವನ್ನು ಮಾಡಿಕೊಳ್ಳಬೇಕು. ಉತ್ತಮ ಸಾಹಿತ್ಯಗಳನ್ನು ಓದಬೇಕು. ಆ ಮೂಲಕ ಕನ್ನಡ ಭಾಷೆಯ ಹಿರಿಮೆ ನಿಮಗೆ ತಿಳಿಯುತ್ತದೆ ಮಾತ್ರವಲ್ಲ ನಿಮ್ಮ ಜ್ಞಾನವೂ ಹೆಚ್ಚಲಿದೆ ಎಂದರು.
ಪ್ರಧಾನ ಭಾಷಣ ಮಾಡಿದ ಜ್ಞಾನಧಾರ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಬಿ.ಎಸ್.ಮಮತಾ, ನಾಡಿನ ಮೇಲಿನ ಅಭಿಮಾನ ಎಂದರೆ ಅದು ಎಲ್ಲವನ್ನೂ ಒಳಗೊಂಡ ಪರಿಶುದ್ಧ ಭಾವನೆ. ತಾಯಿಯ ಕುರಿತು ನಾವು ಎಂದಿಗೂ ಕೀಳಾಗಿ ಕಾಣುವುದಿಲ್ಲ ಎಂದರು.