ಹುಣಸೂರಿನಲ್ಲಿ 71ನೇ ವನ್ಯಜೀವಿ ಸಪ್ತಾಹ

HUN-OCT-6-2(VANYAJEEVI SAPTHAHA)
Published on

ಹುಣಸೂರು : ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗದ ವತಿಯಿಂದ ಸೋಮವಾರ ಆಯೋಜಿಸಿದ್ದ 71ನೇ ವನ್ಯಜೀವಿ ಸಪ್ತಾಹದ ಕಾಲ್ನಡಿಗೆ ಜಾಥಾದಲ್ಲಿ ನಗರದ ಜ್ಞಾನಧಾರ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸಂಭ್ರಮದಿಂದ ಪಾಲ್ಗೊಂಡಿದ್ದರು.

ನಗರದ ಅರಣ್ಯ ಕಚೇರಿ ಆವರಣದಲ್ಲಿ ಕಾಲ್ನಡಿಗೆ ಜಾಥಾಕ್ಕೆ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರಕೃತಿಯೊಡನೆ ಬದುಕುತ್ತಲೇ ಗ್ರಾಮ, ನಗರಗಳಲ್ಲಿರುವ ಮನುಷ್ಯನ ಬದುಕಿಗೆ ಅಗತ್ಯ ನೀರು, ಗಾಳಿಯನ್ನು ನಿಸ್ವಾರ್ಥವಾಗಿ ನೀಡುತ್ತಿರುವ ಪರಿಸರ ಮತ್ತು ವನ್ಯಪ್ರಾಣಿಗಳಿಗೆ ನಾವೆಂದೂ ಋಣಿಗಳಾಗಿರಬೇಕು ಎಂದರು. ಮಾತು ಬಾರದ, ಧ್ವನಿಯಿಲ್ಲದ ಪ್ರಾಣಿಗಳಿಗೆ ನಾವು ದನಿಯಾಗಬೇಕು. ಮನುಷ್ಯ ಏನು ಮಾಡಿದರೂ ಸ್ವಾರ್ಥಕ್ಕಾಗಿಯೇ ಆಗಿರುತ್ತದೆ. ಆದರೆ ಮರ, ಪ್ರಾಣಿಗಳು ತಮಗಾಗಿ ಏನನ್ನೂ ಮಾಡಿಕೊಳ್ಳುವುದಿಲ್ಲ. ಆಧುನಿಕತೆಯ ಭರಾಟೆಯಲ್ಲಿ ಪ್ರಕೃತಿ ನಾಶವಾಗುತ್ತಿದೆ. ಇದನ್ನು ಇಂದಿನ ಯುವಸಮೂಹ ಅರಿತುಕೊಳ್ಳಬೇಕು. ಪ್ರಕೃತಿಯಿಲ್ಲದೇ ಜೀವಿಗಳಿರಲು ಸಾಧ್ಯವಿಲ್ಲ. ಅರಣ್ಯವನ್ನು ತನ್ನಪಾಡಿಗೆ ತಾನಿರಲು ಬಿಡಬೇಕಿದೆ. ಆಗ ಮನುಷ್ಯನಿಗೂ ಒಳಿತು, ವನ್ಯಪ್ರಾಣಿಗಳಿಗೂ ಕ್ಷೇಮ ಎಂದರು.ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ರವಿಶಂಕರ್ ಮಾತನಾಡಿ, 71ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಅ.2ರಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ತಾಲೂಕುಗಳಲ್ಲಿ ವಿವಿಧ ರೀತಿಯ ಅರಿವು ಜಾಥಾ, ಬೀದಿನಾಟಕ, ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಈ ಮೂಲಕ ಕಾಡಂಚಿನ ಗ್ರಾಮೀಣರಲ್ಲಿ ಮತ್ತು ಯುವಸಮೂಹಕ್ಕೆ ಅರಣ್ಯದ ಅಸ್ತಿತ್ವದ ಅಗತ್ಯತೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು. ಅವಘಡದಲ್ಲಿ ನಮ್ಮೆಲ್ಲರಿಂದ ದೂರಾದ ಸಾಕಾನೆ ಅರ್ಜುನನ ಸ್ಮರಣಾರ್ಥ ಗ್ರಾಮೀಣ ಭಾಗಗಳಲ್ಲಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಅ.9ರಂದು ಅಂತರಸಂತೆ ವಲಯವ್ಯಾಪ್ತಿಯಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯು ಸಾರ್ವಜನಿಕರ ಸಹಕಾರವಿದ್ದಲ್ಲಿ ಮಾತ್ರ ಸಾಧ್ಯವಾಗಲಿದೆ ಎಂದರು.

ಕಾಲ್ನಡಿಗೆ ಜಾಥವು ಸೇತುವೆ ರಸ್ತೆ ಮೂಲಕ ಸಂವಿಧಾನ ವೃತ್ತ, ಕಲ್ಪತರು ವೃತ್ತವನ್ನು ಹಾದು ಬೈಪಾಸ್ ಮೂಲಕ ಅರಣ್ಯ ಇಲಾಖೆಯಲ್ಲಿ ಸಮಾಪನ ಗೊಂಡಿತು. ದಾರಿಯುದ್ದಕ್ಕೂ ಪ್ರಮುಖ ವೃತ್ತಗಳಲ್ಲಿ ವಿದ್ಯಾರ್ಥಿಗಳು ವನ್ಯಜೀವಿಗಳ ವೇಷಭೂಷಣದೊಂದಿಗೆ ಗಮನಸೆಳೆದರು.

ಜಾಥಾದಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಪಿ.ಎ.ಸೀಮಾ, ಪ್ರಾದೇಶಿಕ ವಿಭಾಗದ ಡಿಸಿಎಫ್ ಮಹಮದ್ ಫಯಾಜುದ್ದೀನ್, ಡಿವೈಎಸ್‌ಪಿ ಗೋಪಾಲಕೃಷ್ಣ, ಎಸಿಎಫ್‌ಗಳಾದ ಲಕ್ಷ್ಮೀಕಾಂತ್, ಮಹದೇವಯ್ಯ, ಹರಿಪ್ರಸಾದ್, ಆರ್‌ಎಫ್‌ಒಗಳಾದ ನಂದಕುಮಾರ್, ಪದ್ಮಶ್ರೀ, ಡಿಆರ್‌ಎಫ್‌ಒಗಳು, ಗಸ್ತು ಅರಣ್ಯ ಪಾಲಕರು, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಸಾಮಿಲ್ ಮಾಲೀಕರು, ಜ್ಞಾನಧಾರ ಕಾಲೇಜಿನ ಪ್ರಾಂಶುಪಾಲ ಎಚ್.ಬಿ.ಕಾರ್ತೀಕ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net