

ಹುಣಸೂರು : ಹವಾಮಾನ ವೈಪರೀತ್ಯದಿಂದ ಟೊಮ್ಯಾಟೋ ಬೆಳೆಗೆ ರೋಗ ಮತ್ತು ಕೀಟ ಬಾಧೆಗಳು ಹೆಚ್ಚಾಗುವ ಸಾಧ್ಯತೆಯಿದ್ದು, ನಿಯಂತ್ರಣಕ್ಕೆ ಕೃಷಿಕರು ತುರ್ತು ಗಮನಹರಿಸಬೇಕು ಎಂದು
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ.ಎಚ್.ನಾಗರಾಜ್ ಮನವಿ ಮಾಡಿದರು. ತಾಲೂಕಿನ ಗಾವಡಗೆರೆ ಹೋಬಳಿ ಹುಲ್ಯಾಳು ಗ್ರಾಮದಲ್ಲಿ ಇಲಾಖೆ ವತಿಯಿಂದ ಗುರುವಾರ ಗ್ರಾಮದ ಪ್ರಗತಿಪರ ರೈತ ಸತೀಶ್ ಅವರ ಜಮೀನಿನಲ್ಲಿ ಆಯೋಜಿಸಿದ್ದ ಟೊಮ್ಯಾಟೋ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹವಾಮಾನದಲ್ಲಿ ದಿಢೀರ್ ಬದಲಾವಣೆಯ ನಡುವೆ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಕಷ್ಟಸಾಧ್ಯವಗಿದೆ. ಆದರೆ ರೈತರು ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು, ಮುಂಜಾಗ್ರತಾ ಕ್ರಮ ಕೈಗೊಂಡಲ್ಲಿ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದರು.
ತಾಲೂಕಿನಲ್ಲಿ ಸುಮಾರು 300 ಹೆಕ್ಟೇರ್ ಭೂಮಿಯಲ್ಲಿ ಟೊಮ್ಯಾಟೋ ಬೆಳೆಯಲಾಗಿದೆ. ರೋಗಬಾಧೆಗಳನ್ನು ನಿಯಂತ್ರಿಸಲು ತಾಂತ್ರಿಕ ಸಲಹೆಗಳನ್ನು ಇಲಾಖೆಯಿಂದ ಪಡೆಯಬೇಕು ಎಂದು ಸಲಹೆ ನೀಡಿದರು. ಗ್ರಾ.ಪಂ.ಅಧ್ಯಕ್ಷ ಲೋಕೇಶ್ , ಸದಸ್ಯ ಪ್ರವೀಣ್, ಪ್ರಗತಿಪರ ರೈತರಾದ ಮಹೇಶ್, ಸತೀಶ್, ಮಂಜುನಾಥ್, ಚನ್ನಬಸಪ್ಪ, ಅಧಿಕಾರಿಗಳಾದ ರವಿ, ಎಸ್.ಎ.ನಿತಿನ್, ಕುಮಾರಿ, ಎ.ಚೈತ್ರಾ ಮತ್ತು ರೈತರು ಹಾಜರಿದ್ದರು.