

ಹುಣಸೂರು : ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಆಚರಿಸಲಾಯಿತು. ನಗರದ ಮಾ ಡಿಜಿಟಲ್ ಸ್ಟುಡಿಯೋ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಛಾಯಾಗ್ರಾಹಕ ವೃತ್ತಿಯಿಂದ
ಸಮಾಜಕ್ಕೆ ಒಳಿತನ್ನು ಮಾಡಲು ಮುಂದಾಗಿ ಎಂದು ಸಲಹೆ ನೀಡಿದರು. ಸಮಾಜದಲ್ಲಿ ಯಾವುದೇ ವೃತ್ತಿ ಮತ್ತು ವ್ಯಕ್ತಿಗೆ ಕೀಳು, ಮೇಲು ಎನ್ನಲಾಗದು. ತಮ್ಮ ತಮ್ಮ ಪಾಲಿಗೆ ಒದಗಿದ ವೃತ್ತಿಯನ್ನು ನಿಷ್ಠೆಯಿಂದ ಮಾಡಿದರೆ ಒಳ್ಳೆಯ ಹೆಸರು, ಗೌರವ, ಹಣ ಗಳಿಸಲು ಸಾಧ್ಯ ಎಂದರು.
ನಗರಸಭಾಧ್ಯಕ್ಷ ಗಣೇಶ್ ಕುಮಾರ್‌ಸ್ವಾಮಿ ಮಾತನಾಡಿ, ಆಧುನಿಕತೆ ಹೆಚ್ಚಾದಂತೆ ಕ್ಯಾಮರಾ ಗಳ ಬೆಲೆಯೂ ಹೆಚ್ಚುತ್ತಲೇ ಇದೆ. ಆದರೂ ವೃತ್ತಿಪರತೆ ಇಲ್ಲಿ ಮುಖ್ಯ ಎಂದರು. ಪೌರಾಯುಕ್ತೆ ಮಾನಸ ಮಾತನಾಡಿದರು. ಹಿರಿಯ ಛಾಯಾಗ್ರಾಹಕರಾದ ಸಿ.ಎ.ಜೋಯಿಸ್, ಕುಮಾರ್, ಎಚ್.ಎಸ್.ಗಜೇಂದ್ರ, ರಮೇಶ್, ಅಣ್ಣಯ್ಯರನ್ನು ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ವಿಜಯ್, ಪದಾಧಿಕಾರಿಗಳಾದ ರಾಮಸ್ವಾಮಿ, ದಾಮೋದರ್, ಸುರೇಶ್ ಇತರರು ಹಾಜರಿದ್ದರು.