

ಶಿರಸಿ: ಸಾಹಿತ್ಯ ಲೋಕದಲ್ಲಿ ಹಾಸ್ಯಕ್ಕೆ ತನ್ನದೇ ಆದ ಸ್ಥಾನವಿದೆ. ಬದುಕಿಗೆ ಹಾಸ್ಯ ಹೊಸ ಚೈತನ್ಯ ನೀಡುತ್ತದೆ ಎಂದು ಚುಟುಕು ಕವಿ ಎಚ್. ಡುಂಡಿರಾಜ್ ಹೇಳಿದರು.
ನಗರದ ಗಣೇಶ ನೇತ್ರಾಲಯದಲ್ಲಿ ನಯನ ಫೌಂಡೇಷನ್, ಐಎಂಎ ಕನ್ನಡ ಬಳಗ, ಎಂ.ಎಂ. ಜೋಶಿ ಗಣೇಶ ನೇತ್ರಾಲಯ, ಸಾಹಿತ್ಯ ಸಂಚಲನ ಸಹಯೋಗದಲ್ಲಿ ಭಾನುವಾರ ವಿನೋದ ಮೋದ-ಕ ಹಾಸ್ಯ ರಸಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿರಿಯರು ನವರಸಗಳನ್ನು ಮಾಡಿ ಒಂದೊಂದು ರಸಗಳಿಗೆ ಒಂದು ದೇವರನ್ನು ಅಧಿಪತಿ ಮಾಡಿದ್ದಾರೆ. ಹಾಸ್ಯ ಎಂದರೆ ಎರಡನೇ ದರ್ಜೆ ಎಂದು ಕೆಲವು ವಿಮರ್ಷಕರು ಭಾವಿಸುತ್ತಾರೆ. ಆದರೆ, ನವರಸಗಳಲ್ಲಿ ಅದಕ್ಕೆ ಎರಡನೇಯ ಸ್ಥಾನ ಇದೆ. ಶೃಂಗಾರ ರಸ ನಂತರದ ಸ್ಥಾನ ಹಾಸ್ಯಕ್ಕಿದೆ ಎಂದರು.
ಉತ್ತರ ಕನ್ನಡ ಜಿಲ್ಲೆ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಸಾಹಿತ್ಯ, ಸಂಗೀತ, ಯಕ್ಷಗಾನ ಕ್ಷೇತ್ರಕ್ಕೆ ಜಿಲ್ಲೆ ಅದರಲ್ಲೂ ಶಿರಸಿ ಕೊಡುಗೆ ಅಪಾರವಾಗಿದೆ. ದೊಡ್ಡ ವ್ಯಕ್ತಿಗಳು ಈ ನೆಲದಿಂದ ಬಂದಿದ್ದಾರೆ ಎಂದ ಅವರು, ನಾವು ಕಲಿತ ಶಾಲೆಗಳ ಬಗ್ಗೆ ಸದಾ ಋಣಿಯಾಗಿರಬೇಕು. ಶಾಲೆಗಳಲ್ಲಿ ಕವಿತೆ, ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಅಭಿರುಚಿ ಬೆಳೆಸಿ ಉತ್ತೇಜಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಶಿಕ್ಷಣ ಕ್ಷೇತ್ರ ಯಶಸ್ವಿಯಾಗಬೇಕಾದರೆ ಒಳ್ಳೆಯ ಗುರುಗಳು ಬೇಕು. ಈಗ ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಹುಡುಗರಿದ್ದಾರೆ. ಶಿಕ್ಷಕರಿಲ್ಲ. ಕೆಲವೆಡೆ ಒಬ್ಬರೇ ಶಿಕ್ಷಕರು ಎನ್ನುವಂತಹ ಸ್ಥಿತಿಯಿದೆ ಎಂದರು.
ಕೃಷಿ ಸಾಲಕ್ಕೆ ತೆಗೆದುಕೊಂಡವರು, ಸಾಲ ಪಡೆದ ಸ್ವಸಹಾಯ ಸಂಘಗಳು ಸಮಯಕ್ಕೆ ಸರಿಯಾಗಿ ಸಾಲ ತುಂಬುತ್ತಾರೆ. ಆದರೆ ಕೆಲ ದೊಡ್ಡ ಉದ್ಯಮಿಗಳು ಬ್ಯಾಂಕ್‌ಗಳಲ್ಲಿ ಪಡೆದ ಸಾಲ ತುಂಬದೇ ವಿದೇಶಕ್ಕೆ ಹಾರುತ್ತಾರೆ ಎಂಬುದನ್ನು ಹಾಸ್ಯಮಯವಾಗಿ ಕಟ್ಟಿಕೊಟ್ಟರು. ಹನಿಗವನದ ಮೂಲಕ ಶಿಕ್ಷಣ ವೈದ್ಯಕೀಯ, ಬ್ಯಾಂಕ್ ಹೀಗೆ ವೃತ್ತಿ ಕ್ಷೇತ್ರಗಳ ಹಾಸ್ಯವನ್ನು ತೋರ್ಪಡಿಸಿದರು.
ನೇತ್ರ ತಜ್ಞ ಡಾ. ಶಿವರಾಮ ಕೆ.ವಿ, ಕೃಷ್ಣ ಪದಕಿ ಉಪಸ್ಥಿತರಿದ್ದರು. ಬಾಲಕೃಷ್ಣ ಕಾರಂತ ಸ್ವಾಗತಿಸಿದರು. ಡಾ.ರಮೇಶ ಹೆಗಡೆ ನಿರೂಪಿಸಿದರು.