

ವಿಜಯಪುರ: ಬಸವಾದಿ ಶರಣರನ್ನು ಅವಮಾನಿಸುವ, ಶರಣರ ತತ್ವ-ಸಿದ್ಧಾಂತ ತಿರುಚುವ, ಶರಣರ ಆಶಯಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ನಿರ್ಮಾಣಗೊಂಡಿರುವ ‘ಶರಣರ ಶಕ್ತಿ’ ಚಲಚನಚಿತ್ರವನ್ನು ಬಿಡುಗಡೆಗೊಳಿಸದಂತೆ ಆಗ್ರಹಿಸಿ ಶರಣ ಸಂಸ್ಕೃತಿ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ವೀರಶೈವ-ಲಿಂಗಾಯತ ಸಮುದಾಯ ಭವನದಲ್ಲಿ ಮೊದಲು ಸಭೆ ನಡೆಸಿದ ಪದಾಧಿಕಾರಿಗಳು ಚಲನಚಿತ್ರದಲ್ಲಿರುವ ಲೋಪ-ದೋಷಗಳ ಕುರಿತು ಚರ್ಚಿಸಿದರು. ಬಳಿಕ ಖಂಡನಾ ನಿರ್ಣಯ ಕೈಗೊಂಡರು. ಅಲ್ಲಿಂದ ಜಿಲ್ಲಾಡಳಿತ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಿರ್ದೇಶಕ ದಿಲೀಪ್ ಶರ್ಮಾ, ನಿರ್ಮಾಪಕಿ ಆರಾಧನಾ ಕುಲಕರ್ಣಿಯವರು ನಿರ್ಮಿಸಿರುವ ಚಲನಚಿತ್ರ ‘ಶರಣರ ಶಕ್ತಿ’ ಸಂಪೂರ್ಣ ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾದುದು. ಕೂಡಲೇ ಸರ್ಕಾರ, ಚಲನಚಿತ್ರ ವಾಣಿಜ್ಯ ಮಂಡಳಿ, ಸೆನ್ಸಾರ್ ಮಂಡಳಿಗಳು ಮಧ್ಯಪ್ರವೇಶಿಸಿ ಮರು ಸೆನ್ಸಾರ್ ಮಾಡಬೇಕು ಮತ್ತು ಅಲ್ಲಿಯವರೆಗೆ ಆ ಚಿತ್ರವನ್ನು ಯಾವುದೇ ಮಾಧ್ಯಮಕ್ಕೆ ಬಿಡುಗಡೆ ಮಾಡಬಾರದೆಂದು, ಅಕ್ಕ ನಾಗಮ್ಮನವರಿಗೆ ಅವಹೇಳನ ಮಾಡಿದ್ದಕ್ಕಾಗಿ ಚಿತ್ರ ತಂಡದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಚಲನಚಿತ್ರ, ನಿರ್ದೇಶಕರು, ನಿರ್ಮಾಪಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಇಂಗಳೇಶ್ವರ ವಚನ ಶಿಲಾಮಂಟಪದ ಮನಿಪ್ರ ಚನ್ನಬಸವ ಮಹಾಸ್ವಾಮೀಜಿ ಮಾತನಾಡಿ, ಬಸವಣ್ಣನವರ ತತ್ವ, ಸಿದ್ದಾಂತಗಳಿಗೆ ಧಕ್ಕೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಇನ್ಮುಂದೆ ಇದನ್ನೆಲ್ಲ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಬ.ಬಾಗೇವಾಡಿ ವಿರಕ್ತ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ, ಶರಣರಿಗೆ ಅವಮಾನಿಸುವ ಶಕ್ತಿಗಳಿಗೆ ಕಡಿವಾಣ ಹಾಕಬೇಕು ಎಂದರು.
ರಾಷ್ಟ್ರೀಯ ಬಸವ ಸೇನಾ ಜಿಲ್ಲಾಧ್ಯಕ್ಷ ಡಾ. ರವಿಕುಮಾರ ಬಿರಾದಾರ ಮಾತನಾಡಿ, ಶರಣರಿಗೆ ಅವಹೇಳನ ಮಾಡಿರುವ ಶರಣರ ಶಕ್ತಿ ಚಲನಚಿತ್ರವನ್ನು ನಿರ್ಬಂಧಿಸಿ ನಿರ್ದೇಶಕ ಹಾಗೂ ನಿರ್ಮಾಪಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಸವಾದಿ ಶರಣರ ತತ್ವದ ಮೇಲಿನ ದಾಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ಇದರ ಹಿಂದೆ ವೈದಿಕ ಸಂಘಟನೆಗಳ ಕೈವಾಡ ಎದ್ದು ಕಾಣುತ್ತಿದೆ ಎಂದರು.
ವಿರೇಶಾನಂದ ಸ್ವಾಮೀಜಿ, ಮನಗೂಳಿ ವಿರಕ್ತ ಮಠದ ಶರಬಯ್ಯ ಸ್ವಾಮೀಜಿ, ಮಾತೋಶ್ರೀ ಚಂದ್ರಕಲಾ ಸಾ. ಗುಣದಾಳ, ಅಖಿಲ ಭಾರತ ವೀರಶೈವ ಮಹಾ ಸಭಾ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿದರು.
ಬಸವಪರ ಸಂಘಟನೆಗಳ ಪದಾಧಿಕಾರಿಗಳಾದ ಪ್ರಕಾಶ ಕಶೆಟ್ಟಿ, ಸಂಗನಗೌಡ ಚಿಕ್ಕೊಂಡ, ಮಹಾಂತೇಶ ಮಡಿಕೇಶ್ವರ, ಎಸ್.ಬಿ. ಕಲ್ಬುರ್ಗಿ, ಬಸವರಾಜ ಕೊಂಡಗುಳಿ, ಸಿ.ಎ. ಗಂಟೆಪ್ಪಗೋಳ, ಅಕ್ಕಮಹಾದೇವಿ ಬುರ್ಲಿ, ಜಿ.ಬಿ. ಸಾಲಕ್ಕಿ, ಸಿ.ಎ. ಪಾಟೀಲ, ಶರಣಬಸವ ಅವಜಿ, ಡಾ. ಮೀನಾಕ್ಷಿ ಪಾಟೀಲ, ಕೆ.ಆರ್. ಕಡೇಚೂರು, ಎಸ್.ಎಸ್. ಬಣಜಗೇರ, ಹಣಮಂತ ಚಿಂಚಲಿ, ಪ್ರಭುಗೌಡ ಪಾಟೀಲ, ಜೆ.ಎಸ್. ಪಾಟೀಲ, ಸಂಗಪ್ಪ ತಡವಲಗಾ, ಒ.ಆರ್. ಬಿರಾದಾರ, ರಾಜೇಶ್ವರಿ ಯರನಾಳ, ಬಸವರಾಜ ಬಾಗೇವಾಡಿ, ಪಂಚಾಕ್ಷರಿ ಕಾಳಹಸ್ಥೆಶ್ವರ ಮಠ, ಬಸವರಾಜ ನಾಯ್ಕೋಡಿ, ಎನ್.ಕೆ. ಕುಂಬಾರ, ವಿವೇಕಾನಂದ ಕಲ್ಯಾಣಶೆಟ್ಟಿ, ಪ್ರಕಾಶ ಕಶೆಟ್ಟಿ, ಮಹಾಂತೇಶ ಆಡಿಗೊಂಡ, ಚನ್ನು ಕಟ್ಟಿಮನಿ, ರಾಜಶೇಖರ ಯರನಾಳ, ಮಲ್ಲಿಕಾರ್ಜುನ ಹಳ್ಳಿ, ಹನಮಂತ ಶಿವಡಿಹತ್ತಿ, ನೀಲಕಂಠ ಹಳ್ಳಿ, ನಿಂಗಪ್ಪ ಸಂಗಾಪುರ, ಮಹಾದೇವಿ ಗೋಕಾಕ, ಬಸವರಾಜ ಸುಳಿಭಾವಿ, ಅನಿಲ ಹೊಸಮನಿ, ನಾಗರಾಜ ಲಂಬು ಮತ್ತಿತರರಿದ್ದರು.