

ಮೈಸೂರು: ಅರಣ್ಯ ಪ್ರದೇಶಗಳು ಕ್ಷೀಣಿಸುತ್ತಿದ್ದು, ವಸತಿ ಪ್ರದೇಶಗಳ ವಿಸ್ತರಣೆಯಿಂದ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸಂಸ್ಥಾಪನೆಗೊಂಡು 50 ವರ್ಷವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮೈಸೂರು ಮತ್ತು ಕೊಡಗು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿ, ಪರಿಸರ ಚೆನ್ನಾಗಿದ್ದರೆ ಮಾತ್ರ ಭೂಮಿಯಲ್ಲಿ ಮನುಷ್ಯ ಜೀವಿಸಲು ಸಾಧ್ಯ, ಪ್ರಕೃತಿ ವಿಕೋಪವಾದರೆ ಏನೇನು ಅನಾಹುತ ಸಂಭವಿಸುತ್ತದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಪ್ರತಿ ವರ್ಷ ಒಂದಲ್ಲ ಒಂದು ಭಾಗದಲ್ಲಿ ಪ್ರಕೃತಿ ವಿಕೋಪದಿಂದ ಸಾವಿರಾರು ಜನ ಸಾಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಗಾಗಿ ಪ್ರಕೃತಿ ವಿಕೋಪಗಳು ಆಗಲು ಮಾನವರೇ ಕಾರಣವಾಗಿದ್ದು ಇದನ್ನು ಅರಿಯಲು ಮುಂದಿನ ಪೀಳಿಗೆಯ ಮಕ್ಕಳಿಗೆ ಪ್ರಕೃತಿ ಹಾಗೂ ಪರಿಸರ ಉಳಿವಿಗೆ ಎಷ್ಟು ಮಹತ್ವ ಕೊಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಸಲಹೆ ನೀಡಿದರು.
ವನ್ಯಜೀವಿಗಳು ಪ್ರಕೃತಿ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಕಾಡಿನಂಚಿನ ಜನರಿಗೆ ಮತ್ತು ಮಕ್ಕಳಿಗೆ ವನ್ಯಜೀವಿಗಳ ಸ್ವಭಾವದ ಬಗ್ಗೆ ಮತ್ತು ಸಹಬಾಳ್ವೆಯ ಬಗ್ಗೆ ತಿಳಿಸಿ ಹೇಳುವ ಅಗತ್ಯವಿದೆ. ಈ ಕಾರ್ಯವನ್ನು ಸರ್ಕಾರೇತರ ಸಂಸ್ಥೆಗಳು ಮತ್ತು ಅರಣ್ಯ ಸಿಬ್ಬಂದಿ ಮಾಡಬೇಕು ಎಂದರು.
ಇಂದು ಸಿಕ್ಕ ಸಿಕ್ಕ ಕಡೆಗಳಲ್ಲಿ ಬೋರ್ ಕೊರೆಸಲಾಗುತ್ತಿದೆ, ಇದು ನೈಸರ್ಗಿಕ ವಿಕೋಪಕ್ಕೆ ಕಾರಣವಾಗಿದೆ, ಮರಗಳನ್ನು ಬೆಳೆಸುವುದಕ್ಕಿಂತ ಕಡಿಯಲಾಗುತ್ತಿದೆ. ಎಲ್ಲೆಂದರಲ್ಲಿ ಮುಗಿಲೆತ್ತರದ ಕಟ್ಟಡಗಳು ಕಟ್ಟಲಾಗುತ್ತಿದೆ. ಇದೆಲ್ಲ ಕಾರಣಗಳಿಂದ ಆಕ್ಸಿಜನ್ ಕೊರತೆ ಆಗುತ್ತಿದೆ ಎಂದು ಹೇಳಿದರು.
ನಮ್ಮ ಕರ್ನಾಟಕ ಅಪಾರ ವನ್ಯ ಸಂಪತ್ತು ಹೊಂದಿರುವ ರಾಜ್ಯ. ಆನೆಗಳಲ್ಲಿ ಪ್ರಥಮ, ಹುಲಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಸುತ್ತಲೂ ಅರಣ್ಯ ಪ್ರದೇಶ ಹೊಂದಿದೆ ಇದನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ ಇಂದು ದೊಡ್ಡ ಸವಾಲಾಗಿದ್ದು, ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. 2 ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಗುಡ್ಡ ಕುಸಿತ ಆಗಿತ್ತು, ಕೇರಳದ ವಯನಾಡಿನಲ್ಲಿ ಊರಿಗೆ ಊರೇ ಕೊಚ್ಚಿ ಹೋಗಿತ್ತು. ಇಂತಹ ಅನಾಹುತ ತಪ್ಪಬೇಕಾದರೆ ಪ್ರಕೃತಿ ಪರಿಸರದ ಕಾಳಜಿ ವಹಿಸಬೇಕು ಎಂದರು.
ದೂರದೃಷ್ಟಿತ್ವದ ನಾಯಕರಾಗಿದ್ದ ಇಂದಿರಾಗಾಂಧಿ ಅವರು ಪ್ರಕೃತಿ ಪರಿಸರ, ವನ, ವನ್ಯಜೀವಿ ಉಳಿಸಲು ರೂಪಿಸಿದ ಕಾನೂನುಗಳು ಮತ್ತು ಕ್ರಮಗಳ ಫಲವಾಗಿ ಇಡೀ ದೇಶದಲ್ಲಿ ಪರಿಸರ, ಪ್ರಕೃತಿ, ಅರಣ್ಯ ಉಳಿದಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಪರಿಸರ ಮಾಲಿನ್ಯ ನಿಯಂತ್ರಣ ಎಂಬುದು ಇಂದು ವಿಜ್ಞಾನ ವಿಷಯದ ಒಂದು ಭಾಗವಾಗಿದೆ. ಜನರ ಜೀವನ ಮತ್ತು ಆರೋಗ್ಯ ಪರಿಸರವನ್ನೇ ಅವಲಂಬಿಸಿದೆ. ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದರು.
ಪರಿಸರದಲ್ಲಿ ಉತ್ತಮ ಆಕ್ಸಿಜನ್ ನೀಡುವಂತಹ ಗಿಡ-ಮರಗಳನ್ನು ಬೆಳೆಸಿ ಉತ್ತಮ ನಗರವನ್ನಾಗಿ ಮಾಡಬೇಕು. ಕಲುಷಿತ ನೀರನ್ನು ಶುದ್ಧೀಕರಣ ಮಾಡಬೇಕು. ಯುವಕರ ಹೆಚ್ಚು ಕಾಳಜಿಯಿಂದ ಪರಿಸರ ಸಂರಕ್ಷಣೆ ಮಾಡುವ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ಪರಿಸರದ ಬಗ್ಗೆ ಅರಿವು ಮೂಡಿಸಬೇಕು ಎಂಬ ನಿಟ್ಟಿನಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಂದಿನ ಪೀಳಿಗೆಗೆ ನಾವು ಕೊಡುವ ದೊಡ್ಡ ಆಸ್ತಿ ಎಂದರೆ ಅದು ಶುದ್ಧ ಗಾಳಿ, ಜಲ ಮತ್ತು ಆಹಾರ ಎಂದು ಹೇಳಿದರು.
ಇಂದಿರಾಗಾಂಧಿ ಅವರು ಪರಿಸರವನ್ನು ರಕ್ಷಣೆ ಮಾಡಬೇಕು ಎಂಬ ದೂರ ದೃಷ್ಟಿಕೋನವನ್ನು ಇಟ್ಟುಕೊಂಡು ಅನೇಕ ಪರಿಸರ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಅದರ ಅನ್ವಯ ನಾವು ಪರಿಸರವನ್ನು ರಕ್ಷಣೆ ಮಾಡಬೇಕು ಎಂದು ಹೇಳಿದರು.
ಯುವಜನರು ಪ್ರಕೃತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಮುಂಬರುವ ಪೀಳಿಗೆಗೆ ಮಾದರಿಯಾಗಬೇಕು. ಪರಿಸರ ಉಳಿಸುವುರದ ಜತೆಗೆ ಮಾನವ ಸಂಕುಲಗಳನ್ನು ಉಳಿಸಬೇಕು. ಪ್ರಕೃತಿ ಉಳಿದರೆ ಮನುಷ್ಯರು ಉಳಿಯುವುದಕ್ಕೆ ಸಾಧ್ಯ ಎಂದು ಹೇಳಿದರು.
ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆ ವಹಿಸಿದರು. ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಅನಿಲ್‌ಕುಮಾರ್, ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ, ಡಾ.ಎಸ್.ಯತೀಂದ್ರ, ಕೆ.ಶಿವಕುಮಾರ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮೈಲ್ಯಾಕ್ ಅಧ್ಯಕ್ಷ ಎಚ್.ಡಿ.ಗಣೇಶ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ರಾಜ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್.ಎಸ್.ಲಿಂಗರಾಜು, ಮಂಡಳಿ ಸದಸ್ಯ ಮರಿಸ್ವಾಮಿಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಅಸೀಫ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಇತರರು ಇದ್ದರು.
ಮೈಸೂರು ಪ್ಲಾಸ್ಟಿಕ್‌ಮುಕ್ತ ನಗರ
ಮೈಸೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್‌ಮುಕ್ತ ನಗರ ಎಂದು ಮುಖ್ಯಮಂತ್ರಿಯವರೇ ಘೋಷಿಸಿದ್ದಾರೆ. ಹಾಗಾಗಿ ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಎಲ್ಲರೂ ಮುಂದಾಗಬೇಕು ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಮಂಡಳಿಯ ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳೊಂದಿಗೆ ಸೇರಿ ನಗರವನ್ನು ಏಕ ಬಳಕೆ ಪ್ಲಾಸ್ಟಿಕ್‌ಮುಕ್ತ ಮಾಡಲು ಕೈಜೋಡಿಸಬೇಕು. ಮಾರುಕಟ್ಟೆಗೆ ಹೋಗುವಾಗ ಬಟ್ಟೆಯ ಕೈಚೀಲ ತೆಗೆದುಕೊಂಡು ಹೋಗಬೇಕು. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸಬಾರದು ಎಂದು ಸಾರ್ವಜನಿಕರದಲ್ಲಿ ಮನವಿ ಮಾಡಿದರು.
ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ಪ್ರದಾನ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ಜಯಚಾಮರಾಜೇಂದ್ರ ಕಾಲೇಜು ಆಫ್ ಇಂಜಿನಿಯರಿಂಗ್, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಮಡಿಲು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಪರಿಸರ ಮತ್ತು ಸಾಮಾಜಿಕ ತಜ್ಞರಾದ ಕೀರ್ತಿ ಡಿಸೋಜ, ಭಾರತ್ ಸ್ಕೌಡ್ಸ್ ಮತ್ತು ಗೈಡ್ಸ್, ಕೊಡಗು ಜಿಲ್ಲೆ ಮಡಿಕೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿ, ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ , ಹೂಡಿಕೇರಿ, ಪೊನ್ನಂಪೇಟೆ ತಾಲೂಕು ಕೊಡಗು ಜಿಲ್ಲೆ ಸೇರಿ 6 ಸಂಸ್ಥೆಗಳಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.