ಮಾನವೀಯತೆ ಮೆರೆದ ಈಶ್ವರ್​ ಮಲ್ಪೆ...

Ishwar-1
Published on

ಐದು ತಿಂಗಳ ಮಗುವಿನ ಶಸ್ತ್ರಚಿಕಿತ್ಸೆಗಾಗಿ ಉಚಿತ ಸೇವೆ

ಆರೂವರೆ ತಾಸಲ್ಲಿ ಬೆಂಗಳೂರು ತಲುಪಿದ ಸಮಾಜಸೇವಕ

ಪ್ರಶಾಂತ ಭಾಗ್ವತ, ಉಡುಪಿ

ಹೃದಯ ಸಂಬಂಧಿತ ಕಾಯಿಲೆಗೆ ತುತ್ತಾಗಿದ್ದ 5 ತಿಂಗಳ ಮಗುವನ್ನು ಶಸ್ತ್ರ ಚಿಕಿತ್ಸೆಗಾಗಿ ಮಣಿಪಾಲದಿಂದ ಬೆಂಗಳೂರಿಗೆ ಆಂಬುಲೆನ್ಸ್​ ಮೂಲಕ ಕೇವಲ ಆರೂವರೆ ತಾಸಿನಲ್ಲಿ ತಲುಪಿಸುವ ಮೂಲಕ ಉಡುಪಿ ಮಲ್ಪೆಯ ಸಮಾಜ ಸೇವಕ ಈಶ್ವರ್​ ಮಲ್ಪೆ ಗಮನ ಸೆಳೆದಿದ್ದಾರೆ.

ಕುಂದಾಪುರ ತಾಲೂಕಿನ ಬೆಲ್ಲಾಳ ಗ್ರಾಮದ ಪುಟ್ಟನಮಕ್ಕಿ ಮನೆಯ ಶಿವಾನಂದ ಪೂಜಾರಿ ಹಾಗೂ ದೀಪಾಲಿ ಪೂಜಾರಿ ದಂಪತಿಯ ವೃಂದಾ ಹೆಸರಿನ 5 ತಿಂಗಳ ಮಗುವನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಜ.2ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆತರಲಾಗಿತ್ತು. ಮಗುವನ್ನು ಪರೀಕ್ಷಿಸಿದ ಡಾ. ಶ್ರೀಕಿರಣ್​ ಎ., ಹೃದಯ ಸಂಬಂಧಿತ ಕಾಯಿಲೆ ಇರುವುದರಿಂದ ಕೂಡಲೇ ಶಸ್ತ್ರ ಚಿಕಿತ್ಸೆಯ ಅಗತ್ಯತೆ ಇದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು.

ಈಶ್ವರ್​ ಮಲ್ಪೆ ಸಹಾಯ

Ishwar-2
ಅನೇಕ ಆಂಬುಲೆನ್ಸ್​ಗಳ ಎಸ್ಕಾರ್ಟ್​ನಲ್ಲಿ ಸಾಗುತ್ತಿರುವ ಮಲ್ಪೆ ಅವರಿದ್ದ ಆಂಬುಲೆನ್ಸ್​ಅನ್ನು ರಸ್ತೆ ಬದಿಯಲ್ಲಿ ಜನರು ಸಾಲಾಗಿ ನಿಲ್ಲುವ ಮೂಲಕ ವೀಕ್ಷಿಸಿದರು.

ಮಗುವಿನ ಜೀವದ ಪ್ರಶ್ನೆ ಹಿನ್ನೆಲೆಯಲ್ಲಿ ಪೂಜಾರಿ ದಂಪತಿ ಆತಂಕಿತರಾಗಿದ್ದರು. ಆಪತ್ಕಾಲದಲ್ಲಿ ಸದಾ ಸಹಕಾರಕ್ಕಾಗಿ ದಾಂಗುಡಿ ಇಡುವ ಸಮಾಜಸೇವಕ ಈಶ್ವರ್​ ಮಲ್ಪೆ ಮೊರೆ ಹೋದರು. ತ್ವರಿತವಾಗಿ ತನ್ನ ಎರಡು ಆಂಬುಲೆನ್ಸ್​ ಮೂಲಕ ಮಣಿಪಾಲಕ್ಕೆ ಆಗಮಿಸಿದ ಅವರು, ಮಗುವನ್ನು ಬೆಂಗಳೂರಿಗೆ ಉಚಿತವಾಗಿ ಕರೆದೊಯ್ದರು.

ಮಗುವಿಗೆ ಸಕಾಲಕ್ಕೆ ಹೆಚ್ಚಿನ ಚಿಕಿತ್ಸೆ ಲಭಿಸುವಂತಾಗಲು ಆಂಬುಲೆನ್ಸ್​ನ ಉಚಿತ ಸೇವೆ ನೀಡಿದ ಈಶ್ವರ್​ ಮಲ್ಪೆ ಹಾಗೂ ಅವರ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ. 

25 ಆಂಬುಲೆನ್ಸ್​ಗಳ ಎಸ್ಕಾರ್ಟ್​

ಮಣಿಪಾಲದಿಂದ ಸಂಜೆ 4 ಗಂಟೆಗೆ ಪಾಲಕರು ಹಾಗೂ ಮಗುವಿನೊಂದಿಗೆ ಆಂಬುಲೆನ್ಸ್​ ಮೂಲಕ ತೆರಳಿದ ಈಶ್ವರ್​ ಮಲ್ಪೆ, ರಾತ್ರಿ 10:30ಕ್ಕೆ ಬೆಂಗಳೂರು ಜಯದೇವ ಆಸ್ಪತ್ರೆ ತಲುಪಿದರು. ಹಿರಿಯಡ್ಕ ಮಾರ್ಗವಾಗಿ ಕಾರ್ಕಳ, ಬೆಳ್ತಂಗಡಿ, ಬೇಲೂರು, ಹಾಸನ, ನೆಲಮಂಗಲ ಮಾರ್ಗವಾಗಿ ಸಂಚರಿಸಿದರು. ಈ ವೇಳೆ ಚಾರ್ಮಾಡಿಯಿಂದ ಬೆಂಗಳೂರು ವರೆಗೂ 25ಕ್ಕೂ ಅಧಿಕ ಸ್ಥಳೀಯ ಆಂಬುಲೆನ್ಸ್​ಗಳ ಚಾಲಕ-ಮಾಲಕರು ಈಶ್ವರ್​ ಮಲ್ಪೆ ಅವರಿಗೆ ಎಸ್ಕಾರ್ಟ್​ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಸಹಕರಿಸಿದರು.

ನೆನೆದಾಗ ಬರುವ ಆಪತ್ಭಾಂದವ

ಸಮುದ್ರ ಮತ್ತು ನದಿ, ಬೃಹತ್ ಕೆರೆಗಳಲ್ಲಿ ಮುಳುಗಿ ಮೃತಪಟ್ಟವರ ಶವವನ್ನು ಮೇಲೆತ್ತುವ ಮೂಲಕ ಸಂತ್ರಸ್ತ ಕುಟುಂಬದವರಿಗೆ ಈಶ್ವರ್ ಮಲ್ಪೆ ಆಸರೆಯಾಗುತ್ತಾರೆ. ತನ್ನ ಕುಟುಂಬ ವಿಚಾರವಾಗಿ ಮನದೊಳಗೆ ಅಪಾರ ನೋವಿದ್ದರೂ ಸಹ ಸಂಕಷ್ಟಕ್ಕೆ ಸಿಲುಕಿದವರಿಗೆ ಅಭಯ ಹಸ್ತ ಚಾಚುತ್ತ ಆಪತ್ಭಾಂದವರಾಗಿ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ರಾಜ್ಯದ ಯಾವುದೇ ಭಾಗಕ್ಕೆ ಕರೆದರೂ ಒಂದಿಷ್ಟೂ ಬೇಸರವಿಲ್ಲದೆ ಸಮಾಜ ಸೇವೆ, ನೊಂದವರ ಸೇವೆಗೆ ಅವರ ಪಾದ ಮುಂದಡಿ ಇಡುತ್ತದೆ.

ಮಗುವನ್ನು ಮಣಿಪಾಲದಿಂದ ಬೆಂಗಳೂರಿಗೆ ಒಯ್ಯುತ್ತಿರುವುದಾಗಿ ನಮ್ಮ ವಾಟ್ಸಾಪ್​ ಗ್ರೂಪ್​ಗೆ ಮೆಸೇಜ್​ ಹಾಕಿದ್ದೆ. ಹೀಗಾಗಿ ಮಾರ್ಗ ಮಧ್ಯೆ ಇರುವ ಎಲ್ಲ ಆಂಬುಲೆನ್ಸ್​ನವರು ಬೆಂಗಳೂರು ತಲುಪುವವರೆಗೂ ನಮ್ಮ ಎರಡು ಆಂಬುಲೆನ್ಸ್​ಗೆ ಎಸ್ಕಾರ್ಟ್​ ಮಾಡಿದರು. ದಾರಿಯುದ್ದಕ್ಕೂ ಜನರು ಹಾಗೂ ಪೊಲೀಸರೂ ಸಹ ಸಹಕರಿಸಿದರು. ಯಾರಿಗೇ ಆದರೂ ಆಪತ್ಕಾಲದಲ್ಲಿ ನಮ್ಮ ತಂಡ ಉಚಿತ ಸೇವೆಗೆ ಎಂದೂ ಸಿದ್ಧ-ಬದ್ಧ. | ಈಶ್ವರ್​ ಮಲ್ಪೆ. ಸಮಾಜ ಸೇವಕ, ಮಲ್ಪೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net