

ಕೊಟ್ಟೂರು: ಪಟ್ಟಣದಲ್ಲಿ ಅರೆಬೆತ್ತಲೆಯಾಗಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥರನ್ನು ಸ್ಥಳೀಯ ಪೊಲೀಸರು ಗುರುವಾರ ಠಾಣೆಗೆ ಕರೆತಂದು ಕಟಿಂಗ್ ಹಾಗೂ ಸ್ನಾನ ಮಾಡಿಸುವುದರೊಂದಿಗೆ ಹೊಸಬಟ್ಟೆ, ಊಟ ಕೊಡುವ ಮೂಲಕ ಮಾನವೀಯತೆ ಮೆರೆದರು. ಅಲ್ಲದೆ ಅವರನ್ನು ಧಾರವಾಡದ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲು ಕ್ರಮವಹಿಸಿದ್ದಾರೆ.
ಜಿಡ್ಡುಗಟ್ಟಿದ ಮೈ, ಎಣ್ಣೆಕಾಣದೆ ಕೂದಲು, ಅರೆ ಬೆತ್ತಲೆಯಾಗಿ ಓಡಾಡುತ್ತಿದ್ದ ಮೂವರು ಪುರುಷರು, ಇಬ್ಬರು ಮಹಿಳೆಯರ ಮನವೊಲಿಸಿ ಠಾಣೆಗೆ ಕರೆತರಲು ಪೊಲೀಸರು ಹರಸಾಹಸಪಡಬೇಕಾಯಿತು.
ಬಳಿಕ ಮೆಜೆಸ್ಟಿಕ್ ಹೇರ್ ಕಟಿಂಗ್ ಶಾಪ್ ಮಾಲೀಕ ಯಲ್ಲಪ್ಪ, ಹಸಿರು ಹೊನಲು ತಂಡದ ಬಂಜಾರು ನಾಗರಾಜ್, ದೊಡ್ಡ ಕೊಟ್ರೇಶ ಮತ್ತು ಪೊಲೀಸ್ ಸಿಬ್ಬಂದಿ ರಾಜಪ್ಪ, ಅನಿಲ್, ಕಲ್ಲೇಶ, ವೀರೇಶ, ಬಸವರಾಜ್, ಶಿವರಾಜ್ ಬಂಧುಗಳಂತೆ ಉಪಚರಿಸಿದರು. ಕಟಿಂಗ್ ಮಾಡಿಸಿ ಸೋಪು ಹಚ್ಚಿ ಮೈ ತೊಳೆಯುತ್ತಿದ್ದಾಗ ಮಕ್ಕಳಂತೆ ಖುಷಿಪಟ್ಟರು. ಬಳಿಕ ಹೊಸ ಬಟ್ಟೆ ತೊಡಿಸಿ, ಹೊಟ್ಟೆ ತುಂಬ ಊಟ ಮಾಡಿಸಲಾಯಿತು.
ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವೆಂಕಟೇಶ ಮಾರ್ಗದರ್ಶನದಲ್ಲಿ ಗುರುವಾರ ಕೂಡ್ಲಿಗಿ ಕೋರ್ಟ್‌ಗೆ ಒಪ್ಪಿಸಿದ ಪಿಎಸ್‌ಐ ಗೀತಾಂಜಲಿ ಶಿಂಧೆ ಅವರು, ಕೋರ್ಟ್ ಆದೇಶದ ಮೇರೆಗೆ ಧಾರವಾಡದ ನಿಮ್ಹಾನ್ಸ್ ಆಸ್ಪತ್ರೆಗೆ ಕಳಿಸಲು ಅಗತ್ಯ ಕ್ರಮವಹಿಸಲಾಗಿದೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪಟ್ಟಣದಲ್ಲಿ ಅರೆ ಬೆತ್ತಲೆಯಾಗಿ ತಿರುಗುಡುತ್ತಿದ್ದಾಗ ಐವರನ್ನು ಕಂಡು ಸಿಪಿಐ, ಡಿವೈಎಸ್ಪಿ ಅವರ ಗಮನಕ್ಕೆ ತರಲಾಯಿತು. ಅಸ್ವಸ್ಥರಿಗೆ ಸ್ನಾನ ಮಾಡಿಸಿ ಮಾನಸಿಕ ಆಸ್ಪತ್ರೆಗೆ ಸೇರಿಸಬಹುದು ಎಂದು ತಿಳಿಸಲಾಯಿತು. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದರು. ಮೇಲಧಿಕಾರಿಗಳ ಮಾರ್ಗದರ್ಶನ ಹಾಗೂ ಹಸಿರು ಹೊನಲು ತಂಡದ ಸಹಕಾರದಿಂದ ಐವರು ಮಾನಸಿಕ ಅಸ್ವಸ್ಥರನ್ನು ಕೋರ್ಟ್ ಆದೇಶದಂತೆ ಧಾರವಾಡದ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗುವುದು.| ಗೀತಾಂಜಲಿ ಶಿಂಧೆ, ಪಿಎಸ್‌ಐ, ಕೊಟ್ಟೂರು