

ಮುಂಡರಗಿ: ಜಗತ್ತಿನಲ್ಲಿ ಧರ್ಮ ಇರುವಂತದ್ದು ಒಂದೇ, ವಿಚಾರಗಳು ಅನೇಕಗಳಿವೆ. ಮನುಷ್ಯತ್ವ ಎನ್ನುವುದೇ ವಿಶ್ವಧರ್ಮ. ಧರ್ಮಕ್ಕೆ ಮನುಷ್ಯತ್ವ ಇಲ್ಲದಿದ್ದರೆ ಶರೀರವಿಲ್ಲದ ಆತ್ಮವಿದ್ದಂತೆ.
ವಿಶ್ವಧರ್ಮವೆಂದರೆ ಅರಿವಿನ ಪ್ರಜ್ಞೆಯಾಗಿದ್ದು, ನಿನ್ನನ್ನು ನೀನು ವಿಸ್ತರಿಸಿಕೊಳ್ಳುವಂತಹದ್ದು ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ವಿಶ್ವಧರ್ಮ ಪ್ರವಚನ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜನಾಂಗ ಹುಟ್ಟಿದ ಮೇಲೆ ಧರ್ಮ ಹುಟ್ಟಿದೆ ಹೊರತು ಧರ್ಮ ಹುಟ್ಟಿದ ನಂತರ ಜನಾಂಗೀಯ ಹುಟ್ಟಿಲ್ಲ. ನಾಗರಿಕತೆ ಬೆಳೆದಂತೆ ವಿಚಾರಗಳು ವಿಸ್ತಾರವಾಗುತ್ತವೆ ಹೊರತು ಧರ್ಮ ಬದಲಾಯಿಸಲು ಆಗುವುದಿಲ್ಲ.
ತಮ್ಮ-ತಮ್ಮ ಸ್ವಾರ್ಥದ ಜೀವನಕ್ಕಾಗಿ ಧರ್ಮಗಳು ಅಟ್ಟಹಾಸ ಮೆರೆಯುತ್ತಿವೆ. ಮನುಷ್ಯತ್ವದ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಮನುಷ್ಯ ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ಗ್ಯಾರಂಟಿ ಎನ್ನುವುದು ಅರಿಯಬೇಕು. ಮನುಷ್ಯ ಚಿಂತನ ಶೀಲರಾಗಿರಬೇಕು. ಪ್ರವಚನ ಆಲಿಸಿ ಜೀವನ ಸುಧಾರಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ಭಾರತೀಯ ಸಂಸ್ಕೃತಿಯು ಮಠಗಳಲ್ಲಿ ಅಡಗಿದೆ. ಭಾರತೀಯ ಸಂಸ್ಕೃತಿಯು ಉನ್ನತ ಸ್ಥಾನ ಹೊಂದಿದೆ. ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು.
ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು. ಅದರಿಂದ ಉನ್ನತ ಸ್ಥಾನ ತಲುಪಲು ಸಾಧ್ಯ. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳ ಬಗ್ಗೆ ಪಾಲಕರು ನಿಗಾ ವಹಿಸಿ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಬಸವಣ್ಣನವರು ಸತ್ಯ ಸಂಗತಿಯ ಸಂದೇಶವನ್ನು ಸಮಾಜಕ್ಕೆ ನೀಡಿದರು. ನಡೆ ನುಡಿಯಲ್ಲಿ ನಾವು ಭಗವಂತನನ್ನು ಕಾಣಬೇಕು. ಉತ್ತಮ ರೀತಿಯಲ್ಲಿ ಬಾಳಬೇಕು ಎಂದರು.