ಮನುಷ್ಯತ್ವವೇ ನಿಜವಾದ ಧರ್ಮ

BAKREID PRAYER
Published on

ನರಗುಂದ: ಭೂಮಿ ಮೇಲೆ ಜನಿಸಿರುವ ಪ್ರತಿಯೊಬ್ಬರು ಯಾವುದೇ ಜಾತಿ, ಧರ್ಮದ ಬೇಧ-ಭಾವವಿಲ್ಲದೇ ಮನುಷ್ಯತ್ವದಿಂದ ಬದುಕುವುದನ್ನು ಕಲಿತುಕೊಳ್ಳಬೇಕು.

ಮಾನವನ ನಿಜವಾದ ಧರ್ಮ ಇದೇ ಆಗಿದೆ ಎಂದು ಅರ್ಭಾಣ ಬಡಾವಣೆಯ ಫತೇಹ ಮಸೀದಿ ಶಾಹಿ ಇಮಾಮ್ ಮೌಲಾನಾ ಅಜಂ ಸರ್‌ಖಾಜಿ ಹೇಳಿದರು.

ಬಕ್ರೀದ್ ಅಂಗವಾಗಿ ಪಟ್ಟಣದ ದಂಡಾಪೂರ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನೆ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪ್ರೀತಿಯ ಏಕೈಕ ಸುಪುತ್ರ ಹಜರತ್ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ತ್ಯಾಗ, ಬಲಿದಾನವೇ ಬಕ್ರೀದ್ ಹಬ್ಬದ ಪ್ರಮುಖ ಆಚರಣೆಯಾಗಿದೆ.

ಆರ್ಥಿಕವಾಗಿ ಸಶಕ್ತರಾಗಿರುವವರು ಬಡವರಿಗೆ ತಮ್ಮ ಕೈಲಾದ ಧಾನ, ಧರ್ಮ ಮಾಡುವುದರ ಜತೆಗೆ ಕಡ್ಡಾಯವಾಗಿ ಹಜ್‌ಯಾತ್ರೆ ಮಾಡಬೇಕು.

ಪ್ರವಾದಿ ಹಜರತ್ ಇಬ್ರಾಹಿಂ ಅವರಲ್ಲಿನ ಭಕ್ತಿ, ದೈವನಿಷ್ಠೆ, ಜೀವನದ ತತ್ವ ಸಿದ್ದಾಂತ, ತ್ಯಾಗದ ಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಆಚರಣೆಯಲ್ಲಿರಿಸಬೇಕು ಎಂದರು.

ಶರಣ ಬಾಬುಸಾಹೇಬ ಜಮಾದಾರ, ಧರ್ಮ ಗುರುಗಳಾದ ಜಹೀರ್‌ಅಹ್ಮದ ಖಾಜಿ, ಎಂ.ಎಂ. ಖಾಜಿ, ಅಯ್ಯೂಬ್ ಖಾಜಿ, ಅಲ್ಲಾಭಕ್ಷ ಸಂಶಿ, ರಜಾಕ ಸಕಲಿ, ಹಜರೇಸಾಬ ಮುಲ್ಲಾ, ಶಾಬುದ್ಧೀನ್ ನದಾಫ ಇತರರಿದ್ದರು.

ಪಟ್ಟಣದ ಹೊರಕೇರಿ ಬಡಾವಣೆಯ 80 ವರ್ಷದ ಫಕ್ರುಭಿ ಭಾಂಗಿ ಎಂಬುವರು ಗುರುವಾರ ಬೆಳಗ್ಗೆ ಅನಾರೋಗ್ಯದಿಂದ ನಿಧನರಾದರು. ಅವರ ಕುಟುಬಸ್ಥರು ಹಾಗೂ ಮುಸ್ಲಿಂ ಸಮಾಜದ ಗುರು-ಹಿರಿಯರು ಸೋಮಾಪೂರ ಬಡಾವಣೆಯ ಈದ್ಗಾ ಮೈದಾನಕ್ಕೆ ಶವ ಮೆರವಣಿಗೆ ತೆಗೆದುಕೊಂಡು ಹೋಗಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net