

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕೆಲಗೇರಿ ಸೇತುವೆ ಬಳಿ ಮೂರು ಬೈಕ್‌ಗಳ ನಡುವೆ ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕರೆತಂದು ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಚಿವ ಸಂತೋಷ್ ಲಾಡ್ ರಾತ್ರಿ ಕೆಲಗೇರಿ ಬಳಿ ತೆರಳುತ್ತಿದ್ದಾಗ ಮೂರು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಯುವತಿಯರು ಹಾಗೂ ನಾಲ್ವರು ಯುವಕರು ಗಾಯಗೊಂಡಿದ್ದರು. ಇದನ್ನು ಗಮನಿಸಿದ ಸಚಿವ ಲಾಡ್, ಕೂಡಲೇ ಗಾಯಾಳುಗಳನ್ನು ತಮ್ಮ ವಾಹನದಲ್ಲೇ ಧಾರವಾಡದ ಸಿವಿಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಲ್ಲಿ ಸಹಾಯ ಮಾಡಿದ್ದಾರೆ.
ಗಾಯಾಳುಗಳನ್ನು ಅಪಘಾತದ ಸ್ಥಳದಿಂದ ಮೇಲೆತ್ತಿ ಆಸ್ಪತ್ರೆಯಲ್ಲಿ ಸ್ಟ್ರೇಚರ್ ಹಾಗೂ ವ್ಹೀಲ್‌ಚೇರ್ ಮೇಲೆ ಸಾಗಿಸಲು ಸಚಿವರೇ ಕೈಜೋಡಿಸಿದ್ದಲ್ಲದೆ, ಗಾಯಾಳುಗಳಿಗೆ ಧೈರ್ಯ ತುಂಬುವ ಕೆಲಸ ಸಹ ಮಾಡಿದರು. ಬಳಿಕ ಗಾಯಾಳುಗಳಿಗೆ ಯಾವುದೇ ಸಮಸ್ಯೆ ಆಗದಂತೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಕೀಯ ಸಿಬ್ಬಂದಿಗೆ ಸೂಚನೆ ನೀಡಿದರು.
ಸಚಿವರ ಸಮಯ ಪ್ರಜ್ಞೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.