ಚೀಟಿಂಗ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಿ

18 HBD 01
ಹುಮನಾಬಾದ್‌ನಲ್ಲಿ ಶುಕ್ರವಾರ ನಡೆದ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಜನರು ಮನವಿಪತ್ರ ಸಲ್ಲಿಸಿದರು. ಲೋಕಾಯುಕ್ತ ಎಸ್‌ಪಿ ಆ್ಯಂಟೋನಿ ಜಾನ್, ಡಿವೈಎಸ್‌ಪಿಗಳಾದ ಎನ್.ಎಂ.ಓಲೇಕರ್, ಜೆ.ಎಸ್.ನ್ಯಾಮಗೌಡರ್, ತಹಸೀಲ್ದಾರ್‌ರಾದ ಅಂಜುಂ ತಬಸ್ಸುಮï, ರವೀಂದ್ರ ದಾಮಾ, ಮಂಜುನಾಥ ಪಂಚಾಳ, ತಾಪಂ ಇಒ ಶಿವಲೀಲಾ, ಸಿಪಿಐ ಗುರು ಪಾಟೀಲï ಇತರರಿದ್ದರು.
Published on

ಹುಮನಾಬಾದ್: ಸಹಕಾರ ಸಂಘಗಳಲ್ಲಿನ ಅವ್ಯವಹಾರದಿಂದ ನಿಶ್ಚಿತ ಠೇವಣಿದಾರರ ಹಣ ವಾಪಸ್ ನೀಡದಿರುವ ಕುರಿತು ದೂರು ನೀಡಿದ ತಕ್ಷಣ ಪೊಲೀಸ್ ಇಲಾಖೆ ಚೀಟಿಂಗ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಎಸ್‌ಪಿ ಆ್ಯಂಟೋನಿ ಜಾನ್ ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಬಂದ ದೂರು ಸ್ವೀಕರಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತ್ವರಿತ ಸಂದಿಸುವಂತೆ ನಿರ್ದೇಶನ ನೀಡಿದರು.

ದೂರು ಸಲ್ಲಿಸಿದ ಉದ್ಯಮಿ ನಂದಕುಮಾರ ಚಿದ್ರಿ ಇತರರು, ಪಟ್ಟಣದ ಸಹಕಾರ ಸಂಘದಲ್ಲಿ ಹೂಡಿಕೆ ಮತ್ತು ನಿಶ್ಚಿತ ಠೇವಣಿ ಮಾಡಿದ ಹಣ ವಾಪಸ್ ನೀಡುತ್ತಿಲ್ಲ. ಸಾಕಷ್ಟು ಜನರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಕೋಟ್ಯಂತರ ರೂ. ಇಲ್ಲಿ ಹೂಡಿಕೆ ಮಾಡಿದ್ದಾರೆ. ಆದರೀಗ ಮರಳಿ ನೀಡದ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ಮತ್ತು ಸಹಕಾರ ಇಲಾಖೆಗೆ ದೂರು ನೀಡಿದ್ದರೂ ಸ್ಪಂದನೆ ಇಲ್ಲವಾಗಿದೆ. ನಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.

ಸ್ಪಂದಿಸಿದ ಲೋಕಾಯುಕ್ತ ಅಧಿಕಾರಿಗಳು ಸಂಬಂಧಿತರ ವಿರುದ್ಧ ಪೊಲೀಸ್ ಇಲಾಖೆ ಚೀಟಿಂಗ್ ಕೇಸ್ ದಾಖಲಿಸಬೇಕು. ಸಾಕಷ್ಟು ಕಡೆ ಸಹಕಾರ ಸಂಘಗಳಿಂದ ನಡೆಯುವ ಅವ್ಯವಹಾರದಿಂದ ಠೇವಣಿದಾರರು ಮತ್ತು ಹೂಡಿಕೆದಾರರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು.

ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಅಪೂರ್ಣ ಬಗ್ಗೆ ಪುರಸಭೆ ಸದಸ್ಯ ರಮೇಶ ಕಲ್ಲೂರ ಇತರರು ಮನವಿಪತ್ರ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಲೋಕಾಯುಕ್ತ ಡಿವೈಎಸ್‌ಪಿಗಳಾದ ಎನ್.ಎಂ. ಓಲೇಕರ್, ಜೆ.ಎಸ್. ನ್ಯಾಮಗೌಡರ್, ತಹಸೀಲ್ದಾರರಾದ ಅಂಜುಂ ತಬಸ್ಸುಮ್, ರವೀಂದ್ರ ದಾಮಾ, ಗ್ರೇಡ್-೨ ತಹಸೀಲ್ದಾರ್ ಮಂಜುನಾಥ ಪಂಚಾಳ, ತಾಪಂ ಇಒ ಶಿವಲೀಲಾ, ಸಿಪಿಐ ಗುರು ಪಾಟೀಲï, ಸಂತೋಷ ರಾಠೋಡ್, ಪ್ರದೀಪ ಕೊಳ್ಳಾ, ವಾಹೀದ್ ಹುಸೇನ್, ಲೋಕಾಯುಕ್ತ ಸಿಬ್ಬಂದಿ ವಿಷ್ಣುರೆಡ್ಡಿ, ಅಡೆಪ್ಪ ಇತರರಿದ್ದರು.

ಕೆಲಸ-ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬರುವ ಜನರ ಜತೆ ಅಧಿಕಾರಿ ಮತ್ತು ಸಿಬ್ಬಂದಿ ಸೌಜನ್ಯದಿಂದ ವರ್ತಿಸಿ ಸಮಸ್ಯೆ ಆಲಿಸಿ ಪರಿಹಾರಕ್ಕೆ ಕ್ರಮ ವಹಿಸಬೇಕು. ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿ ಮಾಡದೆ ಲಂಚಕ್ಕೆ ಬೇಡಿಕೆ ಇರಿಸಿದ್ದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
| ಆ್ಯಂಟೋನಿ ಜಾನ್ ಲೋಕಾಯುಕ್ತ ಎಸ್‌ಪಿ

ಭ್ರಷ್ಟಾಚಾರ ವಿರುದ್ಧ ಜನಜಾಗೃತಿ ಬರಹದಡಿ ಲೋಕಾಯುಕ್ತ ಕಚೇರಿ, ಅಧಿಕಾರಿ ದೂರವಾಣಿ ಮಾಹಿತಿ ಫಲಕ ನೀಡುತ್ತಿದ್ದು, ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕಾಣುವ ಸ್ಥಳದಲ್ಲಿ ಅಳವಡಿಸಬೇಕು. ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಸಾರ್ವಜನಿಕರನ್ನು ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡಿಸಬಾರದು.
| ಎನ್.ಎಂ. ಓಲೇಕರ್ ಲೋಕಾಯುಕ್ತ ಡಿವೈಎಸ್‌ಪಿ

ಆಸ್ಪತ್ರೆ, ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ: ಪಟ್ಟಣದ ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣಕ್ಕೆ ಲೋಕಾಯುಕ್ತ ಎಸ್‌ಪಿ ಆ್ಯಂಟೋನಿ ಜಾನ್ ನೇತೃತ್ವದ ತಂಡ ದಿಢೀರ್ ಭೇಟಿ ನೀಡಿ ಪರಿಶೀಲಿಸಿತು. ಆಸ್ಪತ್ರೆ ವಿವಿಧ ವಾರ್ಡ್ಗಳಲ್ಲಿನ ರೋಗಿ ಮತ್ತವರ ಸಂಬಂಧಿಕರ ಸಮಸ್ಯೆ ಆಲಿಸಿ ಸಮಸ್ಯೆಯಾಗದಂತೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಂಬಂಧಿತರಿಗೆ ಸೂಚಿಸಿದರು. ವಿವಿಧ ಸೇವೆಗಳ ಕುರಿತು ಆಸ್ಪತ್ರೆ ಸಿಎಂಒ ಡಾ.ನಾಗನಾಥ ಹುಲಸೂರೆ ಮಾಹಿತಿ ನೀಡಿದರು. ಬಳಿಕ ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡ ಅಧಿಕಾರಿಗಳು, ದುರ್ವಾಸನೆಯಿಂದ ಕೂಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕುರಿತು ವ್ಯವಸ್ಥಾಪಕರನ್ನು ಪ್ರಶ್ನಿಸಿದರು. ಶೌಚಗೃಹ ವ್ಯವಸ್ಥೆ ನೋಡಿ ನೋಟಿಸ್ ನೀಡುವಂತೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net