

ಹುಮನಾಬಾದ್: ಪುರಸಭೆಯಲ್ಲಿ ಸ್ವಚ್ಛ ಭಾರತ ಯೋಜನೆ ಟೆಂಡರ್ ಮೂಲಕ ತಂದಿರುವ ಟ್ರ್ಯಾಕ್ಟರ್‌ನ ಎರಡು ಹೊಸ ಟ್ರಾಲಿಗಳಿಗೆ ಗ್ರುಪ್ ಮಾಡಿದ ಹಳೆಯ ಟೈರ್ ಹಾಗೂ ಬಣ್ಣ ಹಚ್ಚಿರುವ ಹಳೆಯ ಡಿಸ್ಕ್ ಬಳಸಿರುವುದು ಸೋಮವಾರ ಬೆಳಕಿಗೆ ಬಂದಿದೆ.
ಪುರಸಭೆ ಆವರಣದಲ್ಲಿ ನಿಲ್ಲಿಸಿದ ಟ್ರಾಲಿಗಳನ್ನು ನೋಡಿದ ಉಪಾಧ್ಯಕ್ಷ ಮುಕ್ರಂ ಜಾ ಇತರರು ಮುಖ್ಯಾಧಿಕಾರಿ ಅನಿಲಕುಮಾರ ಕುಲಕರ್ಣಿ, ಪರಿಸರ ಅಭಿಯಂತರ ಅವರಿಗೆ ತೋರಿಸಿ ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಕಿಡಿಕಾರಿದರು.
ಸುಮಾರು ನಾಲ್ಕು ಲಕ್ಷ ರೂ.ಗಳಲ್ಲಿ ಎರಡು ಟ್ರಾಲಿ ತಂದಿದ್ದು, ಟೈರ್ ಗ್ರುಪ್ ಮಾಡಿ ಹಳೆಯ ಡಿಸ್ಕ್ ಇರುವುದು ಕಂಡು ಬಂದಿದೆ. ಯಾವ ಸದಸ್ಯರಿಗೂ ಈ ಬಗ್ಗೆ ಮಾಹಿತಿ ಇಲ್ಲ. ಇವುಗಳನ್ನು ಗುತ್ತಿಗೆದಾರನಿಂದ ಹೇಗೆ ಪಡೆದಿದ್ದೀರಿ? ಭಾರಿ ಅವ್ಯವಹಾರ ನಡೆದಿದ್ದು, ಅಧಿಕಾರಿಗಳು ಶಾಮೀಲಾಗಿರುವಂತೆ ಕಾಣುತ್ತಿದೆ ಎಂದು ತರಾಟೆಗೆ ತೆಗೆದುಕೊಂಡು ಸ್ವಚ್ಚಗೊಳಿಸುವ ಯಂತ್ರ ಖರೀದಿಸಿರುವ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು.
ಪರಿಸರ ಅಭಿಯಂತರ ವೀರಶೆಟ್ಟಿ ಈ ಬಗ್ಗೆ ನನಗೂ ಮಾಹಿತಿ ಇಲ್ಲ. ಭಾನುವಾರ ತಂದು ನಿಲ್ಲಿಸಲಾಗಿದೆ. ವಾಪಸ್ ಕೊಂಡೊಯ್ಯಲು ಸಂಬಂಧಿಸಿದ ಗುತ್ತಿಗೆದಾರನಿಗೆ ತಿಳಿಸಲಾಗುವುದು ಎಂದರು. ಇದಕ್ಕೆ ಸಿಡಿದ ಸದಸ್ಯರು, ಗುತ್ತಿಗೆದಾರನನ್ನು ಕೂಡಲೇ ಕಪ್ಪು ಪಟ್ಟಿಗೆ ಸೇರಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕೆಂದು ಸೂಚಿಸಿದರು.
ಸದಸ್ಯರಾದ ಸುನೀಲ ಪಾಟೀಲ್, ರಮೇಶ ಕಲ್ಲೂರ, ಎಸ್.ಎ. ಬಾಸೀದ್, ಅಫ್ಸರ್‌ಮಿಯಾ, ಗುಂಡಪ್ಪ, ದತ್ತು ಪರೀಟ್ ಇತರರಿದ್ದರು.