

ಹುಮನಾಬಾದ್: ನರೇಗಾ ಕೂಲಿ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರ ಕಂದಮ್ಮಗಳ ಆರೈಕೆಗಾಗಿ ಸರ್ಕಾರದ ಮಹತ್ವಕಾಂಕ್ಷಿ ಕೂಸಿನ ಮನೆ (ಶಿಶು ಪಾಲನ ಕೇಂದ್ರ) ಆಸರೆಯಾಗಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಲು ಜಾಗೃತಿ ಮೂಡಿಸಬೇಕೆಂದು ತಾಪಂ ಸಹಾಯಕ ನಿರ್ದೇಶಕ (ಉ.ಖಾ) ಜಗನ್ನಾಥ ಹೇಳಿದರು.
ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯೋಗದಡಿ ಶಿಶು ಪಾಲನ ಕೇಂದ್ರ (ಮಕ್ಕಳ ಆರೈಕೆದಾರಿಗೆ) ಎರಡನೇ ಹಂತದ ತರಬೇತಿಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕೆಲಸಕ್ಕೆ ಹೋದಾಗ ತಮ್ಮ ಪುಟ್ಟ ಮಕ್ಕಳನ್ನು ಬಿಟ್ಟು ಹೇಗೆ ಕೆಲಸಕ್ಕೆ ಹೋಗಬೇಕು ಎಂಬ ಚಿಂತೆ ನರೇಗಾ ಕಾರ್ಮಿಕರನ್ನು ಕಾಡುತ್ತಿತ್ತು. ಈ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರ ೨೦೨೩ -೨೦೨೪ನೇ ಆಯವ್ಯಯದಲ್ಲಿ ಘೋಷಿಸಿದಂತೆ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವವರ ೩ ವರ್ಷದೋಳಗಿನ ಮಕ್ಕಳಿಗೆ ಶಿಶುಪಾಲನ ಕೇಂದ್ರಗಳನ್ನು ಕೂಸಿನ ಮನೆ ಎಂಬ ಹೆಸರಿನಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ. ದುಡಿಯುವ ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡಲು ಮತ್ತು ಅವರ ಮಕ್ಕಳಿಗೆ ಸುರಕ್ಷತೆ, ಪೌಷ್ಟಿಕ ಆಹಾರ ಸೌಲಭ್ಯ ಒದಗಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಯೋಜನಾ ಅಧಿಕಾರಿ ಸತೀಶ, ರಜನಿ, ಜಗದೀಶ ಹಾಗೂ ಐಇಸಿ ಸಂಯೋಜಕ ವಿಶ್ವನಾಥ, ಉಮೇಶ ಮಲಗಿ ಇತರರಿದ್ದರು.