ಹೆಚ್ಚುತ್ತಿದೆ ಮಾನವ-ವನ್ಯಜೀವ ಸಂಘರ್ಷ

Wild elephant destroyed banana Plantation 2 14 JAN 20
Published on

* ದಶಕದಿಂದ 24 ಕೋಟಿ ರೂ. ಪರಿಹಾರ

* ಮತ್ತೆ ಮುಂದುವರಿದ ಆನೆ ಸೆರೆ ಕಾರ್ಯಾಚರಣೆ

ಗಂಗಾಧರ್ ಬೈರಾಪಟ್ಟಣ ರಾಮನಗರ

ಜಿಲ್ಲೆಯ ಕಾಡು ಪ್ರಾಣಿಗಳ ಹಾವಳಿಗೆ ಮಿತಿಯೇ ಇಲ್ಲದಂತಾಗಿದೆ. ಮಾನವ ಮತ್ತು ವನ್ಯ ಮೃಗಗಳ ಸಂಘರ್ಷ ವರ್ಷದಿಂದ ವರ್ಷಕ್ಕೆ ತಾರಕಕ್ಕೆ ಏರುತ್ತಲೇ ಇದೆ. ರೈತರು, ಅರಣ್ಯ ಇಲಾಖೆ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದರೂ ಸಂಘರ್ಷ ಮಾತ್ರ ಕಡಿಮೆಯಾಗಿಲ್ಲ.

ಇದರ ಹೊರತಾಗಿಯೂ ಜಿಲ್ಲೆಯಲ್ಲಿ 13 ವರ್ಷಗಳಿಂದ ಬರೋಬ್ಬರಿ 24.32 ಕೋಟಿ ರೂ. ವನ್ನು ಅರಣ್ಯ ಇಲಾಖೆ ಪರಿಹಾರವಾಗಿ ರೈತರಿಗೆ ನೀಡಿದೆ. ಆದರೆ, ಇದು ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಆಗಿದೆ.

ಕಳೆದುಕೊಂಡಿದ್ದು ಅಗಾಧ

ಜಿಲ್ಲೆಯಲ್ಲಿ 12 ವರ್ಷಗಳಿಂದ ಈಚೆಗೆ ರೈತರು ಕಾಡು ಪ್ರಾಣಿಗಳಿಂದ ಕಳೆದುಕೊಂಡಿದ್ದು ಅಗಾಧ. ಆದರೆ, ಇಲಾಖೆ ಕೊಟ್ಟಿದ್ದು ಮತ್ರ ಸ್ವಲ್ಪ. ಜಿಲ್ಲೆಯಲ್ಲಿ ಈವರೆಗೆ 35 ಮಂದಿ ರೈತರು ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗಿದ್ದು, ಒಟ್ಟು 147 ಮಂದಿ ಮೃತಪಟ್ಟಿದ್ದಾರೆ. ಬೆಳೆ ನಷ್ಟ ಪ್ರಕರಣ ಲೆಕ್ಕವೇ ಇಲ್ಲ. ಒಟ್ಟು 31,485 ಬೆಳೆ ನಷ್ಟ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು, ಇದಕ್ಕಾಗಿ ಇಲಾಖೆ ಕೊಟ್ಟಿದ್ದು ಮಾತ್ರ 16.36 ಕೋಟಿ ರೂ. ಪರಿಹಾರ. ಇನ್ನು ಜಮೀನುಗಳಲ್ಲಿ ಉಂಟಾದ ಆಸ್ತಿ ಪಾಸ್ತಿ ನಷ್ಟದ ಒಟ್ಟು 1520 ಪ್ರಕರಣ ದಾಖಲಾಗಿದ್ದು, 74 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇನ್ನು ಸಾಕು ಪ್ರಾಣಿಗಳಾದ ಹಸು, ಎಮ್ಮೆ, ಕುರಿ, ಮೇಕೆ ಸಾವಿನ ಪ್ರಕರಣಗಳು ಸಹ ಜಿಲ್ಲೆಯಲ್ಲಿ ಹೆಚ್ಚಿದ್ದು, 5813 ರಾಸುಗಳು ಕಾಡು ಪ್ರಾಣಿಗಳ ಹಾವಳಿಗೆ ಮೃತಪಟ್ಟಿವೆ. ಇದಕ್ಕಾಗಿ ರೈತರಿಗೆ ಒಟ್ಟು 4.20 ಕೋಟಿ ರೂ. ಪರಿಹಾರ ನೀಡಲಾಗಿದೆ.

ಆನೆಗಳ ಸೆರೆ ಕಾರ್ಯ

ಜಿಲ್ಲೆಯಲ್ಲಿ ಆನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲೀ ಆಗಾಗ ಆನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗ ಮತ್ತೆ ಆನೆಗಳ ಸೆರೆ ಕಾರ್ಯ ಆರಂ‘ಗೊಂಡಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಸೆರೆ ಹಿಡಿದ ಒಂದು ಆನೆ ಸೇರಿ ಒಟ್ಟು 8 ಆನೆಗಳನ್ನು ಕಾರ್ಯಾಚರಣೆ ಮೂಲಕ ಸೆರೆ ಹಿಡಿದು ಬೇರೆ ಕಾಡಿಗೆ ಬಿಡಲಾಗಿದೆ. ಆದರೆ, ಬುದ್ಧಿವಂತ ಪ್ರಾಣಿಯಾದ ಆನೆ ಮತ್ತೆ ತನ್ನ ಸ್ವಸ್ಥಾನಕ್ಕೆ ಬರುತ್ತಿರುವುದು ಅರಣ್ಯ ಇಲಾಖೆ ಮತ್ತು ರೈತರಿಗೆ ಆತಂಕ ತಂದಿದೆ.

ಸರ್ಕಾರದ ಮಾನದಂಡದಂತೆ ವನ್ಯ ಜೀವಿಗಳಿಂದ ತೊಂದರೆಗೆ ಒಳಗಾದ ರೈತರಿಗೆ ಪರಿಹಾರ ನೀಡಲಾಗಿದೆ. ಈವರೆಗೆ ಸುಮಾರು 24 ಕೋಟಿ ರೂ. ಪರಿಹಾರ ನೀಡಲಾಗಿದೆ. ಇದರ ಜತೆಗೆ ಆನೆಗಳನ್ನು ಹಿಡಿಯಲು ಪ್ರಯತ್ನ ಮಾಡುತ್ತಲೇ ಇದ್ದೇವೆ.ರಾಮಕೃಷ್ಣಪ್ಪ, ಡಿಸಿಎಫ್ ರಾಮನಗರ

ಸಿ.ಪುಟ್ಟಸ್ವಾಮಿ, ರೈತ ಮುಖಂಡ

ರೈತರ ನೆರವಿಗೆ ಅರಣ್ಯ ಇಲಾಖೆ ಬರುತ್ತಿಲ್ಲ. ನಮಗೆ ಆನೆ ಸೇರಿದಂತೆ ಇತರ ಕಾಡು ಪ್ರಾಣಿಗಳಿಂದ ರಕ್ಷಣೆ ಬೇಕಿದೆ. ತಪಸ್ಸಿನಂತೆ ಬೆಳೆ ಬೆಳೆಯುವ ರೈತರಿಗೆ ತಪಸ್ಸಿನ ಫಲ ಸಿಗುತ್ತಿಲ್ಲ. ಇಲಾಖೆ ಕೊಡುವ ಪರಿಹಾರ ನಮಗೆ ಸಾಲದು.

ಕೊಟ್ಟ ಪರಿಹಾರವೆಷ್ಟು ವರ್ಷ          ಮೊತ್ತ (ಕೋಟಿಗಳಲ್ಲಿ) 2012-13   01.65 2013-14   00.41 2014-15   00.30 2015-16   00.74 2016-17    00.85 2017-18    01.79 2018-19    01.46 2019-20   00.87 2020-21    01.42 2021-22    03.40 2022-23    03.57 2023-24    05.75 2024-25    02.71 ಒಟ್ಟು           24.32

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net