

ಮುದ್ದೇಬಿಹಾಳ: ಸಂತರು, ಶರಣರಲ್ಲಿ ಸ್ವಾರ್ಥ, ಮೇಲು- ಕೀಳು ಭಾವನೆ ಇರಲಿಲ್ಲ. ಮಾನವ ಕಲ್ಯಾಣಕ್ಕಾಗಿ ದೇವರನ್ನು ಸಾಕ್ಷಾತ್ಕರಿಸಿಕೊಂಡು ಮಾರ್ಗದರ್ಶನ ಮಾಡುವಂಥವರಾಗಿದ್ದರು. ಆದರೆ ಸ್ವಾರ್ಥ ತುಂಬಿದ ನಮಗೆಲ್ಲ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಶಾಸಕ, ಕೆಎಸ್‌ಡಿ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಏರ್ಪಡಿಸಿದ್ದ ಸಂತ ಕನಕದಾಸರ ಜಯಂತಿಯಲ್ಲಿ ಅವರು ಮಾತನಾಡಿದರು. ಉಪನ್ಯಾಸಕ ಪರಶುರಾಮ ಚೌಡಕೇರ ಕನಕದಾಸರ ಕುರಿತು ಉಪನ್ಯಾಸ ನೀಡಿದರು.
ತಹಸೀಲ್ದಾರ್ ಬಲರಾಮ ಕಟ್ಟಿಮನಿ, ತಾಪಂ ಇಒ ಎನ್.ಎಸ್.ಮಸಳಿ, ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಸದಸ್ಯರಾದ ಸಹನಾ ಬಡಿಗೇರ, ಭಾರತಿ ಪಾಟೀಲ, ಸಂಗಮ್ಮ ದೇವರಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಮುಖಂಡರಾದ ಬಾಪುರಾವ್ ದೇಸಾಯಿ, ಬಿ.ಕೆ.ಬಿರಾದಾರ, ಮಲಕೇಂದ್ರಗೌಡ ಪಾಟೀಲ, ಸಂತೋಷ ನಾಯ್ಕೋಡಿ, ಸಂಗಣ್ಣ ಮೇಲಿನಮನಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಹಾಲುಮತ ಸಮಾಜದವರು ಪಾಲ್ಗೊಂಡಿದ್ದರು. ಸಿಆರ್‌ಪಿ ಜಿ.ಎಚ್.ಚವ್ಹಾಣ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನ ಸಂತ ಕನಕದಾಸರ ಭಾವಚಿತ್ರ ಪೂಜಿಸಲಾಯಿತು.
ಸರಳ ಆಚರಣೆಗೆ ತಕರಾರು: ಮುದ್ದೇಬಿಹಾಳ ತಹಸೀಲ್ದಾರ್ ಕಚೇರಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ಈಚೆಗೆ ನಿಡಗುಂದಿಗೆ ವರ್ಗವಾಗಿದ್ದ ಕಂದಾಯ ಇಲಾಖೆಯ ನೌಕರರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲು ತಾಲೂಕು ಆಡಳಿತ ತೀರ್ಮಾನಿಸಿತ್ತು. ಇದಕ್ಕೆ ತಕರಾರು ತೆಗೆದ ಸಮಾಜದ ಕೆಲ ಮುಖಂಡರು ಮೃತಪಟ್ಟಿರುವ ಸಿಬ್ಬಂದಿ ನಿಡಗುಂದಿ ತಹಸೀಲ್ದಾರ್ ಕಚೇರಿಯವರಾಗಿದ್ದು ಅವರಿಗೆ ಗೌರವ ಸಲ್ಲಿಸಿ ಕನಕದಾಸರ ಭಾವಚಿತ್ರ ಮೆರವಣಿಗೆ ಸಮೇತ ಕಾರ್ಯಕ್ರಮ ಆಚರಿಸಲು ಪಟ್ಟು ಹಿಡಿದರು. ಆದರೆ ಸಮಾಜದ ಮುಖಂಡರ ಮನವೊಲಿಕೆಯ ನಂತರ ಪಟ್ಟು ಸಡಿಲಿಸಿದರೂ ತಕರಾರು ತೆಗೆದವರು ತಾಲೂಕಾಡಳಿತದ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಡೊಳ್ಳು ಬಾರಿಸಲೂ ಆಸ್ಪದ ಕೊಡಲಿಲ್ಲ. ಶಾಸಕರು ಕಾರ್ಯಕ್ರಮಕ್ಕೆ ಬಂದು ಈಗ ಸರಳವಾಗಿ ಆಚರಿಸೋಣ, ಇನ್ನೊಂದು ದಿನ ವಿಜೃಂಭಣೆಯಿಂದ ಆಚರಿಸೋಣ. ಸಹಕಾರ ಕೊಡಿ ಎಂದು ಕೋರಿ ಅಸಹನೆ ತಣ್ಣಗಾಗಿಸಿದರು.
ಶಾಸಕರ ಆರೋಗ್ಯದಲ್ಲಿ ಏರುಪೇರು: ಕಾರ್ಯಕ್ರಮದ ನಂತರ ಶಾಸಕರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಾಣಿಸಿಕೊಂಡಿತು. ಇದ್ದಕ್ಕಿದ್ದಂತೆ ಬೆವರಲು ಪ್ರಾರಂಭಿಸಿದರು. ಕೂಡಲೇ ಅವರನ್ನು ಕಾರಿನಲ್ಲಿ ಹುಡ್ಕೋದಲ್ಲಿರುವ ಸ್ವಗರಹಕ್ಕೆ ಕರೆದೊಯ್ಯಲಾಯಿತು. ಕಾರಿನಿಂದ ಇಳಿಯುವಾಗ ಸುಲಭವಾಗಿ ನಡೆಯಲು ಆಗದ ಕಾರಣ ಸಹಾಯಕರ ನೆರವಿನಿಂದ ಮನೆಯ ಒಳಗೆ ಹೋದರು. ನಂತರ ಡಾ.ಬಸವರಾಜ ಕರೇಕಲ್ಲ ಪಾಟೀಲ ನೇತೃತ್ವದಲ್ಲಿ ಸ್ಥಳೀಯ ವೈದ್ಯರು, ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಆಗಮಿಸಿ ಇಸಿಜಿ, ಇನ್ನಿತರ ಸಾಧನಗಳಿಂದ ತಪಾಸಣೆ ನಡೆಸಿದರು. ಶಾಸಕರು ಮಧುಮೇಹಕ್ಕಾಗಿ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದು 2-3 ದಿನಗಳಿಂದ ಕಾರ್ಯಕ್ರಮದ ಒತ್ತಡದಲ್ಲಿ ಸಮಯಕ್ಕೆ ಸರಿಯಾಗಿ ಇನ್ಸುಲಿನ್ ತೆಗೆದುಕೊಳ್ಳಲಾಗದ ಕಾರಣ ತೀವ್ರ ನಿಶ್ಯಕ್ತಿಯಿಂದ ಈ ಸಮಸ್ಯೆ ತಲೆದೋರಿತ್ತು ಎಂದು ಮೂಲಗಳು ತಿಳಿಸಿವೆ.