ಮಾನವೀಯ ಮೌಲ್ಯಗಳು ಕ್ಷೀಣ: ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ

8
Published on

ಮೈಸೂರು: ಜನತೆಯಲ್ಲಿ ಮೌಲ್ಯಗಳನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಶ್ರಮಿಸುತ್ತಿದೆ ಎಂದು ಮೈಸೂರು ಉಪವಿಭಾಗದ ಈಶ್ವರೀಯ ವಿಶ್ವವಿದ್ಯಾಲಯಗಳ ಮುಖ್ಯ ಸಂಚಾಲಕಿ, ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ ತಿಳಿಸಿದರು.

ಬನ್ನೂರಿನ ಬೆಳ್ಳಿವನ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ರಾಜಯೋಗ ಭವನಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಇಂದು ಎಲ್ಲರೂ ಕರ್ಮೇಂದ್ರಿಯಗಳಿಗೆ ದಾಸರಾಗಿದ್ದಾರೆ. ಆದ್ದರಿಂದ ಜಗತ್ತಿನ ನೈತಿಕ ಅಧಃಪತನದೆಡೆಗೆ ನಾಗಾಲೋಟದಲ್ಲಿ ಓಡುತ್ತಿದ್ದೇವೆ. ಜನತೆಯಲ್ಲಿ ಮೌಲ್ಯಗಳು ಕಡಿಮೆ ಅಗುತ್ತಿವೆ. ಜಗತ್ತಿನಲ್ಲಿ ಅನೇಕ ಪ್ರಕಾರದ ವಿಶ್ವವಿದ್ಯಾಲಯಗಳಿದ್ದರೂ ದ್ವೇಷ, ಕ್ರೌರ್ಯ, ಅಸೂಯೆ, ಹಿಂಸೆ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರಗಳನ್ನು ನಿರ್ಮೂಲನೆ ಮಾಡುವ ಶಿಕ್ಷಣ ಎಷ್ಟೇ ಡೊನೇಷನ್ ಕಟ್ಟಿದರೂ ಸಿಗುತ್ತಿಲ್ಲ ಎಂದರು.

ಹೀಗಾಗಿ ಜನತೆಯಲ್ಲಿ ಮೌಲ್ಯಗಳನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಈಶ್ವರೀಯ ವಿಶ್ವವಿದ್ಯಾಲಯವು ಕಾರ್ಯನಿರ್ವಹಿಸುತ್ತಿದ್ದು, ಮಾನವನನ್ನು ಮಹಾ ಮಾನವನನ್ನಾಗಿ ಮಾಡುವ ರಾಜಯೋಗ ಭವನಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ನಿವೃತ್ತ ಡಿವೈಎಸ್‌ಪಿ ಬಿ.ಕೆ.ಕೃಷ್ಣಮೂರ್ತಿ ಮಾತನಾಡಿ, ಕತ್ತಲಿನಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ, ನರಕದಿಂದ ಸ್ವರ್ಗದೆಡೆಗೆ ಹೋಗುವ ಸರಳ ಜ್ಞಾನವನ್ನು ತಿಳಿಸುತ್ತಿರುವ ಬ್ರಹ್ಮಾಕುಮಾರಿಯರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ತ್ರಿವೇಣಿ ಇಂಜಿನಿಯರಿಂಗ್‌ನ ವ್ಯವಸ್ಥಾಪಕ ರಾಮಚಂದ್ರ ಮಾತನಾಡಿ, ರಾಜಯೋಗವು ಅಂತರಂಗವನ್ನು ಶುದ್ಧಗೊಳಿಸುವ ಒಂದು ವಿಧಿಯಾಗಿದೆ. ಅದನ್ನು ಕರಗತ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಆಧ್ಯಾತ್ಮಿಕ ಚಿಂತಕ ಪ್ರಾಂಶುಪಾಲ ರಾಜಯೋಗಿ ಬ್ರಹ್ಮಾಕುಮಾರ ರಂಗನಾಥ ಶಾಸ್ತ್ರಿ ಮಾತನಾಡಿ, ಬೆಳೆಯುವ ಮಕ್ಕಳಲ್ಲಿ ಆಧ್ಯಾತ್ಮಿಕ ಶಿಕ್ಷಣದ ಕಂಪನ್ನು ಕೊಡುವುದು ಬಹಳ ಅವಶ್ಯ. ಇದರಿಂದ ಮಕ್ಕಳು ಮುಂದೆ ಸನ್ಮಾರ್ಗದಲ್ಲಿ ನಡೆಯಲು ಸಹಕಾರಿ ಅಗಲಿದೆ ಎಂದು ತಿಳಿಸಿದರು.

ಮನೋಬಲ ತರಬೇತುದಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಮಾತನಾಡಿ, ಮನಸ್ಸನ್ನು ಸುಂದರ ಮಾಡಿಕೊಳ್ಳಲು ಶಾಂತಿ, ಸಮಾಧಾನಕರ ಜೀವನ ನಡೆಸಲು ಸಕಾರಾತ್ಮಕ ಚಿಂತನೆ ಮಾಡುವ ಅಭ್ಯಾಸ ಬಹಳ ಅವಶ್ಯಕ. ದಿನದಲ್ಲಿ ಅರ್ಧ ಗಂಟೆಯಾದರೂ ಸ್ವಯಂ ಸಮಯವನ್ನು ಕೊಟ್ಟರೆ ವೈದ್ಯರ ಬಳಿ ಹೋಗುವ ಅವಶ್ಯಕತೆ ಇರುವುದಿಲ್ಲ. ಪರಿಪೂರ್ಣ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಬ್ರಹ್ಮಕುಮಾರಿ ವಿವಿಯ ಜಿಲ್ಲಾ ಸಂಚಾಲಕಿ ಪ್ರಭಾಮಣಿಜಿ, ಪುರಸಭೆ ಮಾಜಿ ಉಪಾಧ್ಯಕ್ಷ ಪಾರ್ಥಸಾರಥಿ, ಯಾಚೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ವೈ.ಎನ್.ಶಂಕರೇಗೌಡ, ವಡ್ಗಲ್ ರಂಗನಾಥಸ್ವಾಮಿ ದೇವಸ್ಥಾನದ ಮೇಲ್ವಿಚಾರಕ ಮಹಾದೇವಸ್ವಾಮಿ, ಪುರಸಭೆ ಸದಸ್ಯೆ ಶೋಭಾ ಸತೀಶ್, ಗ್ರಾಮ ಪಂಚಾಯಿತಿ ಸದಸ್ಯ ವೈ.ಎಸ್.ರಾಮಸ್ವಾಮಿ, ಓಂ ಶಾಂತಿ ನ್ಯೂ ಸರ್ವಿಸ್‌ನ ಬಿ.ಕೆ.ಆರಾಧ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net