

ಬೆಳಗಾವಿ: ಸಹನೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರ್ಯ, ಅಹಿಂಸೆ, ಸಹೋದರತ್ವ, ಸಹಿಷ್ಣುತೆಯಂತಹ ಮಾನವೀಯ ಮೌಲ್ಯಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇಂದಿನ ಯುವಕರು ಅವುಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು ಇತ್ತೀಚಿಗೆ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎನ್. ಸಿ. ಸಿ. ಐಪಿ ಹಾಗೂ ಎ.ಐ.ಸಿ. ಟಿ. ಇ. ಸಹಯೋಗದಲ್ಲಿ ಪ್ರಾಧ್ಯಾಪಕರಿಗಾಗಿ ಆಯೋಜಿಸಿದ್ದ ಮಾನವೀಯ ಮೌಲ್ಯಗಳ ಅಭಿವೃದ್ಧಿ ಕಾರ್ಯಾಗಾರದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಮುಂದುವರೆದು ಮಾತನಾಡಿದ ಶ್ರೀಗಳು ಸರಳ ಜೀವನ ಶೈಲಿ ಹಾಗೂ ಆಸೆ ಆಕಾಂಕ್ಷೆ ರಹಿತ ಗುಣಗಳಿಂದ ವ್ಯಕ್ತಿ ಇತರರಿಗೆ ಆದರ್ಶಪ್ರಾಯನಾಗಬಲ್ಲ. ಮಾನವೀಯ ಮೌಲ್ಯಗಳನ್ನ ಅಳವಡಿಸಿಕೊಂಡು ನಾವೆಲ್ಲರೂ ಮಾನವರಾಗಿ ಬದುಕುವುದನ್ನು ಕಲಿಯಬೇಕು ಎಂದು ಶ್ರೀಗಳು ತಿಳಿಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರ್ಮನ್ ಎಫ್. ವಿ. ಮಾನ್ವಿ ಮಾತನಾಡಿ ಮಾನವೀಯ ಮೌಲ್ಯಗಳು ನಮ್ಮನ್ನು ದುಶ್ಚಟಗಳಿಂದ ದೂರವಿಟ್ಟು ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಜಾಗೃತಗೊಳ್ಳಲು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಾಗಾರದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಬಿ. ಆರ್. ಪಟಗುಂದಿ ಬದುಕಿನ ಎಲ್ಲ ಸ್ಥರಗಳಲ್ಲಿ ಉಪಯುಕ್ತವಾಗುವ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಕಲಿಸಿಕೊಡುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದ್ದು, ಪ್ರಾಧ್ಯಾಪಕರು ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಪ್ರಯತ್ನಿಸಬೇಕು ಎಂದರು.
ಖ್ಯಾತ ಪ್ರಾಧ್ಯಾಪಕರಾದ ಡಾ. ಯಶವಂತ ಪಾಟೀಲ, ಡಾ. ಶಶಿಧರ ಕುರೋಡೆ, ಪ್ರೊ. ವಿನಯಸಿಂಗ ರಜಪೂತ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಡಾ. ಜಯಶ್ರೀ ರೂಡಗಿ, ಡಾ. ಪ್ರಶಾಂತ ಭಗವತಿ ಸೇರಿದಂತೆ ಇತರರಿದ್ದರು.