ಸಮಾಜದಲ್ಲಿ ಮಾನವೀಯ ಮೌಲ್ಯ ಕಡಿಮೆ: ಶಾಮ್ ಪ್ರಸಾದ್

kaanunu ariu
Published on

ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯ ಕಡಿಮೆಯಾಗುತ್ತಿದ್ದು, ಸ್ವಾರ್ಥ ಹೆಚ್ಚಾಗುತ್ತಿದೆ. ಇದು ಸಮಾಜದ ಅಭಿವೃದ್ಧಿಗೆ ಪೂರಕವಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಸಿ.ಶಾಮ್ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆಯ ಪ್ರಯುಕ್ತ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸಹ ಇತರರಂತೆ ಬದುಕಬೇಕೆಂಬುದು ಎಲ್ಲರಲ್ಲಿಯೂ ಬರಬೇಕು. ಆದರೆ, ನಾನು ಬದುಕಿದರೆ ಸಾಕು, ಇತರರು ಹೇಗಿದ್ದಾರೋ ಹಾಗೆಯೇ ಇರಲಿ ಎಂಬುದು ಹೆಚ್ಚಾಗುತ್ತಿದೆ. ಇದು ಸಮಾಜದ ಅಭಿವೃದ್ಧಿಗೆ ಒಳ್ಳೆಯದಲ್ಲ ಎಂದು ನ್ಯಾಯಾಧೀಶರು ಪ್ರತಿಪಾದಿಸಿದರು.


ಮಾನವ ಹಕ್ಕು ಉಲ್ಲಂಘನೆಯು ಸುಸಂಸ್ಕೃತರಲ್ಲಿ ಹೆಚ್ಚಾಗುತ್ತಿದೆ. ದೌರ್ಜನ್ಯಗಳು ಹೆಚ್ಚು ತಿಳಿದವರಿಂದಲೇ ಆಗುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದ ಅವರು, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರು ತಮ್ಮ ತಮ್ಮ ಕಾಲ ಘಟ್ಟದಲ್ಲಿ ಸಮಾಜದ ಏಳಿಗೆಗೆ ಹೋರಾಟ ಮಾಡಿದ್ದಾರೆ. ಸಾಮರಸ್ಯದ ಬದುಕು ಮತ್ತು ಸಮಾನತೆಗಾಗಿ ದುಡಿದಿದ್ದಾರೆ ಎಂದು ಸ್ಮರಿಸಿದರು.


ರಾಷ್ಟ್ರದಲ್ಲಿ ಸಂವಿಧಾನವಿದೆ, ಕಾನೂನುಗಳಿವೆ. ಆದರೂ ಸಹ ಅಮಾನವೀಯ ಘಟನೆಗಳು, ದೌರ್ಜನ್ಯಗಳು ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಿರುವುದು ಅಮಾನವೀಯ ಘಟನೆಯಾಗಿದೆ. ಗುಜರಾತ್ ರಾಜ್ಯದಲ್ಲಿ ಕಳೆದ ತಿಂಗಳು ಸಂಬಳ ಕೇಳಿದಕ್ಕೆ ಸಿಬ್ಬಂದಿಯನ್ನು ಥಳಿಸಿರುವ ಘಟನೆ, ಶವ ಸಾಗಿಸಲು ಆಂಬ್ಯುಲೆನ್ಸ್ ವಾಹನ ಇಲ್ಲದೆ ಮೈಲುಗಟ್ಟಲೆ ಹೊತ್ತುಕೊಂಡು ಹೋಗುವಂತೆ ಮಾಡಿದ್ದು, ಹೀಗೆ ಹಲವು ಅಮಾನವೀಯ ಘಟನೆಗಳು ಕೇಳಿ ಬರುತ್ತವೆ. ಈ ಎಲ್ಲಾ ಘಟನೆಗಳನ್ನು ಗಮನಿಸಿದಾಗ ಮಾನವೀಯ ಮೌಲ್ಯ ಕುಸಿಯುತ್ತಿರುವುದು ಕಂಡು ಬರುತ್ತಿದೆ. ಇಂತಹ ಕೃತ್ಯಗಳಿಗೆ ಅವಕಾಶ ಮಾಡಬಾರದು. ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಪ್ರತಿಯೊಬ್ಬರಲ್ಲೂ ಆತ್ಮಾವಲೋಕನ ಅಗತ್ಯ ಎಂದರು.


ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ಕಾನೂನಿನ ಅರಿವು ಪಡೆಯಬೇಕು. ಸಂವಿಧಾನಾತ್ಮಕವಾಗಿ ರಚನೆಯಾಗಿರುವ ಪ್ರತಿಯೊಂದು ವಿ?ಯದ ಬಗ್ಗೆಯೂ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.


ಕೃತ್ಯ ಸಾಬೀತಾಗುವವರೆಗೂ ಅಪರಾಧಿಯಾಗಿರುವುದಿಲ್ಲ ಆರೋಪಿ ಆಗಿರುತ್ತಾನೆ. ಪ್ರತಿಯೊಂದು ಹಂತದಲ್ಲಿ ಪರಿಶೀಲಿಸಿಯೇ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಆರೋಪಿಗೂ ಕೂಡ ಮಾತನಾಡಲು ಅವಕಾಶ ನೀಡುತ್ತದೆ. ಮಾನವ ಹಕ್ಕು ನಿರಪರಾಧಿಗೆ ಶಿಕ್ಷೆಯಾಗಬಾರದೆಂಬ ದ್ಯೇಯೋದ್ದೇಶ ಹೊಂದಿದೆ ಎಂದು ತಿಳಿಸಿದರು.


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಕಾನೂನು ನೆರವು ಅಭಿರಕ್ಷಕ ಕೆ.ಆರ್.ವಿದ್ಯಾಧರ ಗೌಡ ಮಾತನಾಡಿ, ಮಾನವ ಹಕ್ಕುಗಳನ್ನು ಸಂರಕ್ಷಿಸಬೇಕು. ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದು. ಇತರರನ್ನು ಗೌರವಿಸಿದಲ್ಲಿ ಮಾನವ ಹಕ್ಕನ್ನು ಸಂರಕ್ಷಿಸಿದಂತೆ ಎಂದರು.


ಬಸವಣ್ಣನ ವಚನ ಕಳಬೇಡ ಕೊಲಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಎಂಬ ವಚನವು ಮಾನವ ಹಕ್ಕು ಮಹತ್ವದ ಬಗ್ಗೆ ಸಾರುತ್ತದೆ. ಅಂದಿನ ಕಾಲದಲ್ಲಿ ರಾಜನಿಗೆ ನೇರವಾಗಿ ಶಿಕ್ಷಿಸುವ ಹಕ್ಕನ್ನು ನೀಡಲಾಗಿತ್ತು. ಇದು ಮಾನವ ಹಕ್ಕಿಗೆ ವಿರುದ್ಧವಾಗಿದೆ. ಯಾವ ಶಿಕ್ಷೆಯನ್ನು ಪರಿಶೀಲಿಸದೆ ಶಿಕ್ಷಿಸುವ ಹಕ್ಕು ಯಾರಿಗೂ ಇಲ್ಲ. ಅದನ್ನು ಮಾನವ ಹಕ್ಕು ವಿವರಿಸುತ್ತದೆ ಎಂದು ತಿಳಿಸಿದರು.


ಮ್ಯಾಗ್ನಾಕಾರ್ಟ ಎಂಬ ಪದ್ಧತಿಯು ಮಾನವ ಹಕ್ಕಿನ ಮೊದಲ ಹೆಜ್ಜೆ ಆಗಿದೆ. ಇದರಿಂದ ಮಾನವ ಹಕ್ಕು ಬಲಿ?್ಠವಾಗಿ ಬೆಳೆಯಲು ಅಡಿಪಾಯ ದೊರಕಿತು ಎಂದರು.


ನಗರದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಕೋರನ ಸರಸ್ವತಿ ಮಾತನಾಡಿ, ೧೦ನೇ ಶತಮಾನದಲ್ಲಿ ಪಂಪ ಹೇಳುವಂತೆ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು ಅಂದಿನಿಂದಲೂ ಸಮಾನತೆಗಾಗಿ ಹೋರಾಟ ನಡೆಸುತ್ತಾ ಬಂದಿದ್ದು ಮಾನವಹಕ್ಕಿನ ಅಡಿಪಾಯ ಇದಾಗಿದೆ. ಕಾನೂನು ಸಡಿಲವಾದಂತೆ ಕಾನೂನು ಉಲ್ಲಂಘನೆ ಆಗುತ್ತದೆ. ಆದ್ದರಿಂದ ಕಾನೂನು ಕೂಡ ಸಡಿಲವಾಗಬಾರದು. ಈ ನಿಟ್ಟಿನಲ್ಲಿ ಮಾನವ ಹಕ್ಕನ್ನು ತಿಳಿದುಕೊಳ್ಳುವ ಅತ್ಯವಶ್ಯಕತೆ ಇದೆ ಎಂದರು.


ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ, ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಅಧಿಕಾರಿ ಕನ್ನಿಕಾ, ಪ್ರಾಧ್ಯಾಪಕರಾದ ಎಚ್.ಪಿ.ನಿರ್ಮಲ, ವನಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net