ಸತ್ಸಂಗದಿಂದ ಮಾನವನ ಉನ್ನತಿ ಸಾಧ್ಯ: ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ

77
Published on

ಸುತ್ತೂರು: ಸತ್ಸಂಗದಿಂದ ಮಾನವನ ಉನ್ನತಿ ಸಾಧ್ಯವಾದರೆ ದುಸ್ಸಂಗದಿಂದ ಅವನತಿಯಾಗುತ್ತದೆ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ನಂಜನಗೂಡು ತಾಲೂಕು ಸುತ್ತೂರು ಶ್ರೀಕ್ಷೇತ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸತ್ಸಂಗದಲ್ಲಿ ಅವರು ಆಶೀರ್ವಚನ ನೀಡಿದರು.
ಎಲ್ಲೋ ಹುಟ್ಟುವ ನದಿಗಳು ಹರಿಯುವ ಪ್ರದೇಶವನ್ನೆಲ್ಲ ಹಸಿರುಗೊಳಿಸಿ ನಾಡನ್ನೆಲ್ಲ ಸಮೃದ್ಧಗೊಳಿಸಿ ಸಾಗರ ಸೇರುತ್ತವೆ. ನದಿಗಳ ನೀರು ಜೀವಸಂಕುಲಕ್ಕೆಲ್ಲ ಯಾವುದೇ ಬೇಧ ಭಾವವಿಲ್ಲದೆ ಉಪಯೋಗವಾಗುವಂತೆ ಮಠಗಳು ಜನಕಲ್ಯಾಣಕ್ಕೆ ಉಪಯೋಗವಾಗುತ್ತಿವೆ. ಮಠಗಳು ನದಿಗಳಂತೆಯೇ ಎಲ್ಲವನ್ನೂ ಪವಿತ್ರಗೊಳಿಸುತ್ತವೆ ಎಂದರು.
ಮಠಗಳೆಂದರೆ ಕಟ್ಟಡಗಳಷ್ಟೇ ಅಲ್ಲ. ಕಾಲಕಾಲಕ್ಕೆ ತಕ್ಕಂತೆ ಅನ್ನ, ಅಕ್ಷರ, ಆಧ್ಯಾತ್ಮವನ್ನು ಧಾರೆ ಎರೆಯುತ್ತ ಎಲ್ಲರಿಗೂ ಜ್ಞಾನ ನೀಡುತ್ತವೆ. ಈ ಭಾಗದಲ್ಲಿ ಹರಿಯುವ ಕಾವೇರಿ ಮತ್ತು ಕಪಿಲಾ ನದಿಗಳಂತೆ ಸುತ್ತೂರು ಮಠ ಹಾಗೂ ಶ್ರೀರಾಘವೇಂದ್ರ ಸ್ವಾಮಿ ಮಠಗಳು ಸಮೃದ್ಧ ನಾಡನ್ನು ಕಟ್ಟಿ ಬೆಳೆಸುವಲ್ಲಿ ಪರಸ್ಪರ ಒಂದಾಗಿ ಸಾಗುತ್ತಿವೆ ಎಂದು ನುಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಂತ್ರಾಲಯದ ಮೂಲ ಬೇರು ನಂಜನಗೂಡಿನಲ್ಲಿದೆ. ಶ್ರೀರಾಘವೇಂದ್ರ ಸ್ವಾಮಿಗಳು ಜನರ ಮನಸ್ಸಿನಲ್ಲಿ ಸ್ಥಿರ ಹಾಗೂ ವಿಶೇಷವಾದ ಪ್ರಭಾವ ಬೀರಿದಂತವರು. ಧಾರ್ಮಿಕವಾಗಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಮನುಷ್ಯ ಪ್ರಯತ್ನಶೀಲನಾಗಬೇಕೆನ್ನುವುದಕ್ಕೆ ಶ್ರೀಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಪ್ರಾಯೋಜಿಸಿದ್ದ ಬೆಂಗಳೂರಿನ ಡಿ.ಸಿ.ಎಕ್ಸ್ ಸಿಸ್ಟಮ್ಸ್ ಲಿಮಿಟೆಡ್‌ನ ಉದ್ಯಮಿ ಡಾ.ಎಚ್.ಎಸ್.ರಾಘವೇಂದ್ರರಾವ್ ಅವರು, ಸುತ್ತೂರು ಮಠದ ವಿದ್ಯಾರ್ಥಿಯಾಗಿದ್ದ ನಾನು ನನ್ನ ಹೆತ್ತವರು ಕಂಡ ಕನಸನ್ನು ನನಸು ಮಾಡಲು ಸಾಧ್ಯವಾಗಿರುವುದಕ್ಕೆ ಸಂತಸವಾಗುತ್ತಿದೆ. ಸುತ್ತೂರು ಶಾಲೆಯಲ್ಲಿ ಕಲಿಯುವುದೇ ಒಂದು ಪುಣ್ಯ ಎಂದು ಹೇಳಿದರು.
ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ಮರಗಳು ಹೇಗೆ ಬಯಸಿ ಬಂದವರಿಗೆ ನೆರಳು, ಆಶ್ರಯ ನೀಡುತ್ತವೆಯೋ ಹಾಗೆಯೇ ಮಠಗಳು ಸಹ ಯಾವುದೇ ಭೇದ-ಭಾವ ಎಣಿಸದೆ ಎಲ್ಲರನ್ನು ಸಮಾನ ದೃಷ್ಟಿಯಲ್ಲಿ ನೋಡುತ್ತವೆ. ಸುತ್ತೂರು ಮತ್ತು ಮಂತ್ರಾಲಯ ಮಠಗಳು ಜಾತ್ಯತೀತವಾಗಿ ಎಲ್ಲರಿಗೂ ಆಶ್ರಯ ನೀಡುತ್ತಿವೆ ಎಂದು ಬಣ್ಣಿಸಿದರು.
ಮರ ಎಂಬ ಪದದಲ್ಲಿ ರ ಅಕ್ಷರದ ಒಳಗೆ ಒಂದು ಚುಕ್ಕೆ ಹಾಕಿದರೆ, ಮಠ ಎಂದಾಗುತ್ತದೆ. ಮಠಕ್ಕೆ ನಾಯಕತ್ವ ಕೊಡುವಂಥ ಗುರುತರ ಜವಾಬ್ದಾರಿ. ಮಠಗಳಿಗೆ ಘನತೆ ಗೌರವ, ಸಂಪ್ರದಾಯವನ್ನು ಎತ್ತರಿಸಿದಂತವರು ಈ ಪೀಠದ್ವಯರು. ಸುತ್ತೂರಿಗೆ ಬಂದರೆ ನನಗೆ ತವರಿಗೆ ಬಂದಂಥಾಗುತ್ತದೆ. ಮಾನವೀಯ ಮೌಲ್ಯಗಳನ್ನು ಮೆರೆಯುವ ಈ ಮಠಗಳು ಉದಾತ್ತತೆಯನ್ನು ಅನುಸರಿಸುತ್ತಿವೆ. ಸಮಾಜದ ಕಣ್ತೆರೆಸುವ ಮಹತ್ತರ ಕಾರ್ಯ ಇಲ್ಲಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುತ್ತೂರಿನ ಉಚಿತ ವಸತಿ ಶಾಲೆಯಲ್ಲಿ ವಿವಿಧ ವಿಷಯಗಳಲ್ಲಿ ವಿಶೇಷ ಸಾಧನೆ ಮಾಡಿದ 56 ವಿದ್ಯಾರ್ಥಿಗಳಿಗೆ ಡಾ.ಎಚ್.ಎಸ್. ರಾಘವೇಂದ್ರರಾವ್ ಅವರಿಂದ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಲಾಯಿತು.
ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಮುಖ್ಯಶಿಕ್ಷಕ ಮ.ಗು.ಬಸವಣ್ಣ, ಸಂಯೋಜಕ ಜಿ.ಎಲ್. ತ್ರಿಪುರಾಂತಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net