ಡ್ರಗ್ಸ್ ಕೇಂದ್ರವಾದ ಮೈಸೂರು: ಸಂಸದ ಯದುವೀರ್ ಕಳವಳ

yaduveer
Published on

ಮೈಸೂರು: ಮೈಸೂರು ಇಡೀ ವಿಶ್ವದಲ್ಲಿ ಸಂಸ್ಕೃತಿ, ಶಿಕ್ಷಣಕ್ಕೆ ಹೆಸರವಾಗಿಯಾಗಿರುವ ಊರು ಎಂದು ಜನಜನಿತವಾಗಿದೆ. ಆದರೆ ನಗರದಲ್ಲಿ ನಡೆದಿರುವ ಡ್ರಗ್ಸ್ ತಯಾರಿಕೆಯು ನಗರಕ್ಕೆ ಕಳಂಕ ತಂದಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಗೃಹ ಸಚಿವಾಲಯ ಮುಂದಾಗಬೇಕು ಎಂದು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ.

ಲೋಕಸಭಾ ಕಲಾಪದಲ್ಲಿ ಬುಧವಾರ ಮಾತನಾಡಿದ ಅವರು, 390 ಕೋಟಿ ರೂ. ಮೌಲ್ಯದ ಎಂಡಿಎಂ ಡ್ರಗ್ಸ್ ಪತ್ತೆಯಾಗಿರುವುದು ಆತಂಕಕಾರಿ ವಿಷಯವಾಗಿದೆ. ಸರ್ಕಾರಿ ಜಾಗದಲ್ಲಿಯೇ ಈ ಡ್ರಗ್ಸ್ ಕೇಂದ್ರವಿದ್ದು, ಕರ್ನಾಟಕ ಪೊಲೀಸರು ಯಾವುದೇ ರೀತಿಯಲ್ಲೂ ಕ್ರಮ ಕೈಗೊಂಡಿಲ್ಲ. ಅಚ್ಚರಿಯ ವಿಷಯ ಎಂದರೆ ಮಹಾರಾಷ್ಟ್ರ ಪೊಲೀಸರು ಮೈಸೂರಿಗೆ ಬಂದು ದಾಳಿ ನಡೆಸಿ ಈ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಿದ್ದಾರೆ ಎಂದು ಸಂಸದರು ಸದನದ ಗಮನಕ್ಕೆ ತಂದರು.

ಕರ್ನಾಟಕದ ಅಸಮರ್ಥ ಗೃಹ ಸಚಿವರನ್ನು ಈ ಬಗ್ಗೆ ಕೇಳಿದಾಗ, ಈ ವಿಷಯದಲ್ಲಿ ನಮ್ಮ ವೈಫಲ್ಯವಿದೆ ಎಂದು ಹೇಳಿ ಕೈತೊಳೆದು ಕೊಂಡಿದ್ದಾರೆ. ಇದು ಬೇಜವಾಬ್ದಾರಿಯ ಪರಮಾವಧಿ. ಇದರಿಂದ ನಮ್ಮ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಎಂದು ಯದುವೀರ್ ಟೀಕಿಸಿದರು. ಇಷ್ಟೇ ಅಲ್ಲ, ನಮ್ಮ ಮೈಸೂರಿನ ಉದಯಗಿರಿಯಲ್ಲಿ ಪೊಲೀಸ್ ಠಾಣೆಯ ಮೇಲೇ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಆದರೆ ರಾಜ್ಯ ಗೃಹ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಟೀಕಿಸಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರನ್ನು ಹರಕೆಯ ಕುರಿ ಮಾಡಲಾಗಿದೆ. ಇದು ಗೃಹ ಇಲಾಖೆಯ ಕಾರ್ಯ ವೈಖರಿ. ಇತ್ತೀಚೆಗೆ ಕಲಬುರಗಿಯಲ್ಲಿ ಕರ್ನಾಟಕದ ಐಟಿಬಿಟಿ ಸಚಿವರ ಆಪ್ತರೊಬ್ಬರು ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಸದನದ ಗಮನ ಸೆಳೆದರು.

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಅಂತಾರಾಜ್ಯ ತನಿಖೆ ನಡೆಸಬೇಕು. ರಾಷ್ಟ್ರೀಯ ಮಾದಕ ದ್ರವ್ಯ ಮಂಡಳಿ (ಎನ್‌ಸಿಬಿ) ಘಟಕವನ್ನು ಮೈಸೂರಿನಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net