ಮಾನವ ಕಳ್ಳಸಾಗಾಣಿಕೆ ಮಾಡಿದರೆ 10 ವರ್ಷ ಜೈಲು ಶಿಕ್ಷೆ

DSC_033864
Published on

ಮೈಸೂರು: ಮಾನವ ಕಳ್ಳತನ ಸಾಗಾಣಿಕೆ ಕೃತ್ಯದಲ್ಲಿ ತೊಡಗುವವರಿಗೆ 7 ರಿಂದ 10 ವರ್ಷ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಕೆ.ಅಮರ್‌ನಾಥ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಬುಧವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಗುವನ್ನು ಕಳ್ಳ ಸಾಗಾಣಿಕೆ ಮಾಡಿದರೆ ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಕಾಯ್ದೆ ಇದ್ದರೂ ಮುಗ್ಧರನ್ನು ನಂಬಿಸಿ ಮಗು ಮಾರಾಟ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾನವ ಕಳ್ಳಸಾಗಾಣಿಕೆ ಅಮಾನವೀಯ ಕೃತ್ಯ. ಮಾನವ ಕಳ್ಳ ಸಾಗಾಣಿಕೆ ತಡೆಯುವ ಅಗತ್ಯವಿದೆ. ಹಲವು ವರ್ಷಗಳ ಹಿಂದೆ ಅಡಿಕೆ ಕಳ್ಳರ ಬಂಧನ ಸುದ್ದಿ ಬರುತಿತ್ತು. ನಂತರ ಬೈಕ್ ಕಳ್ಳರ ಸುದ್ದಿ ಓದುತ್ತಿದ್ದೆವು. ನಂತರ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಳ್ಳರ ಬಂಧನದ ಸುದ್ದಿ ನೋಡಿದೆವು. ಇದೀಗ ಮಾನವ ಕಳ್ಳಸಾಗಾಣಿಕೆ ಪ್ರಕರಣಗಳು ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆಧುನಿಕ ಗುಲಾಮಗಿರಿಯ ಸಂಕೇತವೇ ಮಾನವ ಕಳ್ಳ ಸಾಗಾಣಿಕೆಗೆ. ಮಾನವ ಕಳ್ಳ ಸಾಗಾಣಿಕೆಗೆ ವಿದ್ಯೆಯ ಕೊರತೆಯೂ ಸಹ ಒಂದು ಕಾರಣವಾಗಿದೆ. ಜಿಲ್ಲಾ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೂ ಕಾನೂನು ಸೇವೆಗಳ ಪ್ರಾಧಿಕಾರವು ಸಂತ್ರಸ್ಥರಿಗೆ ಕಾನೂನು ನೆರವು ನೀಡಲಿದೆ. ಮಾನವ ಕಳ್ಳ ಸಾಗಾಣಿಕೆಯಲ್ಲಿ ಪತ್ತೆಯಾದವರನ್ನು ರಕ್ಷಣೆ ಮತ್ತು ಪುನರ್ವಸತಿ ಮಾಡುವುದು ಮುಖ್ಯವಾಗಿದೆ. ಮಾನವ ಕಳ್ಳಸಾಗಾಣಿಕೆ ತಡೆಯುವುದು ಒಬ್ಬರಿಂದ ಮಾತ್ರ ಆಗುವ ಕಾರ್ಯವಲ್ಲ. ಇದಕ್ಕೆ ಸಾಮೂಹಿಕ ಪ್ರಯತ್ನದ ಅವಶ್ಯಕತೆ ಇದೆ. ಎಲ್ಲ ಇಲಾಖೆಗಳು ತಮ್ಮ ಹಂತದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆಯಲು ಕೆಲಸ ಮಾಡಬೇಕು ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಮಲ್ಲಿಕ್ ಮಾತನಾಡಿ, ಮಾನವ ಕಳ್ಳಸಾಗಾಣಿಕೆ ತಡೆಗೆ ಎಲ್ಲ ಇಲಾಖೆಗಳು ಸೇರಿ ಕೆಲಸ ಮಾಡಬೇಕು. ಮಾನವ ಕಳ್ಳ ಸಾಗಾಣಿಕೆ ದೇಶದ ಮೂರನೇ ದೊಡ್ಡ ಆದಾಯವಾಗಿ ರೂಪುಗೊಂಡಿರುವುದು ಕಳವಳಕಾರಿ ಸಂಗತಿ. ಹಾಗಾಗಿ ಮಾನವ ಕಳ್ಳಸಾಗಾಣಿಕೆ ತಡೆಗೆ ಎಲ್ಲರು ಪ್ರಯತ್ನ ನಡೆಸಬೇಕು ಎಂದು ಹೇಳಿದರು.

ಯಾವುದೇ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ಸಾಗಾಣಿಕೆ ಮಾಡಿದರೆ ಅದನ್ನು ಮಾನವ ಕಳ್ಳಸಾಗಾಣಿಕೆ ಎಂದು ಪರಿಗಣಿಸಲಾಗುತ್ತದೆ. ಹೆಣ್ಣು ಮಕ್ಕಳನ್ನು ಮದುವೆಯ ನೆಪದಲ್ಲಿ ಕರೆದೊಯ್ದು ಮಾರಾಟ ಮಾಡುವ ದಂಧೆ ಸಹ ನಡೆಯುತ್ತದೆ. ಅಕ್ರಮ ಜಾಲದಲ್ಲಿ ಸಿಲುಕಿ ಹೊರ ಬಂದ ಮೇಲೆ ಅವರಿಗೆ ಪುನರ್ವಸತಿ ಕಲ್ಪಿಸಿದರೂ ಮಾನಸಿಕ ಹಿಂಸೆ ತಡೆಯಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮ ಹಾಗೂ ಮನೆಗಳ ಪ್ರತಿಯೊಂದು ವಿಚಾರ ಗಳನ್ನು ಅರಿತಿರುತ್ತಾರೆ. ಕಾಣೆಯಾದವರ ಮಾಹಿತಿ ದೊರೆತರೆ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು. ಕೆಲವೊಮ್ಮೆ ಹಳ್ಳಿಗಳಲ್ಲಿ ಕಾಣೆಯಾದವರ ಬಗ್ಗೆ ದೂರು ನೀಡದೆ ಸುಮ್ಮನಾಗುತ್ತಾರೆ. ಎರಡು, ಮೂರು ವರ್ಷ ಕಳೆದ ನಂತರ ದೂರು ನೀಡುತ್ತಾರೆ. ಕಾಣೆಯಾದ ಮರುದಿನವೇ ದೂರು ಕೊಟ್ಟರೆ ಪತ್ತೆ ಮಾಡಬಹುದು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಬಸವರಾಜು ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯನ್ನು ಬುಡಸಮೇತ ಕಿತ್ತು ಹಾಕಬೇಕಾದರೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಅಮಾಯಕರಿಗೆ ಇಲ್ಲಸಲ್ಲದ ಆಮಿಷಗಳನ್ನೊಡ್ಡಿ ಮಾನವ ಸಾಗಾಣಿಕೆ ನಡೆಯುತ್ತಿದ್ದು, ಇದನ್ನು ತಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಬಸವರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಜವರೇಗೌಡ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ರವಿಚಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net