

ಚನ್ನರಾಯಪಟ್ಟಣ: ಮಾನವ ಕಳ್ಳ ಸಾಗಣೆ ದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಇದಕ್ಕೆ ನವಜಾತ ಶಿಶುವಿನಿಂದ ಹಿಡಿದು ವಯೋವೃದ್ಧರವರೆಗೆ ಬಲಿಪಶು ಆಗುತ್ತಿರುವುದು ಅತ್ಯಂತ ಕಳವಳಕಾರಿ ಎಂದು ಚನ್ನರಾಯಪಟ್ಟಣ ಡಿವೈಎಸ್ಪಿ ಪಿ.ರವಿಪ್ರಸಾದ್ ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಪಂ, ಪೊಲೀಸ್ ಇಲಾಖೆ, ಚನ್ನರಾಯಪಟ್ಟಣ ಮತ್ತು ಬಾಗೂರು ಲಯನ್ಸ್ ಕ್ಲಬ್ ಸನ್‌ರೈಸ್ ಸಹಯೋಗದಲ್ಲಿ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ವಿವಿಧ ಆಮಿಷಗಳಿಗೆ ಒಳಗಾಗಿ, ಮೋಸದ ಬಲೆಗೆ ತುತ್ತಾಗಿ ಶೋಷಿತರಾಗುವುದನ್ನು ಸಮುದಾಯದ ಪ್ರತಿಯೊಬ್ಬರೂ ಅರಿತಾಗ ಮಾನವ ಕಳ್ಳ ಸಾಗಣೆ ತಡೆಯಬಹುದು. ಅಮಾಯಕ ಹೆಣ್ಣು ಮಕ್ಕಳು ಮಾನವ ಕಳ್ಳ ಸಾಗಣೆದಾರರಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳನ್ನು ಅಪಹರಿಸಿ ಬಾಲ ಕಾರ್ಮಿಕ ಪದ್ಧತಿ, ಭಿಕ್ಷಾಟನೆಗೆ ಹಚ್ಚುವುದು, ಮಾನವ ದೇಹದ ಅಂಗಾಂಗಗಳ ಮಾರಾಟದ ಪ್ರಸಂಗಗಳು ಕೇಳಿ ಬರುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಮಾನವ ಕಳ್ಳ ಸಾಗಣೆ ತಡೆಗೆ ಸಂಕಲ್ಪ ತೊಡಬೇಕು ಎಂದರು.
ಸಮಾಜದಲ್ಲಿ ಮಾನವ ಕಳ್ಳ ಸಾಗಣೆ ಬಹುದೊಡ್ಡ ಸಮಸ್ಯೆಯಾಗಿ ಬೆಳೆದಿದ್ದು, ಹೆಚ್ಚಾಗಿ ಬಲಿಯಾಗುತ್ತಿರುವವರು ಹೆಂಗಸರು ಮತ್ತು ಮಕ್ಕಳು. ಇದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಇದೊಂದು ಸುವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದ್ದು, ತಡೆಗಟ್ಟಲು ನೆರವಾಗಬೇಕು. ಅಪರಿಚಿತರು ಆಸೆ ಆಮಿಷಗಳನ್ನು ಒಡ್ಡಿದರೆ ಮೋಸದ ಬಲೆಗೆ ಬಲಿಯಾಗಬಾರದು. ಕಾನೂನು ವ್ಯವಸ್ಥೆಯೊಂದಿಗೆ ನಮ್ಮಲ್ಲಿ ಸಮನ್ವಯತೆ ಇದ್ದಲ್ಲಿ ಇಂತಹ ಅಪರಾಧಗಳನ್ನು ಕಡಿಮೆ ಮಾಡಬಹುದು. ಇಂತಹ ಕೃತ್ಯಗಳ ಬಗ್ಗೆ ಅರಿವಿಗೆ ಬಂದಲ್ಲಿ ಪೊಲೀಸ್ ಇಲಾಖೆಗೆ ಸುಳಿವು ನೀಡಬೇಕು ಎಂದು ತಿಳಿಸಿದರು.
ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ವಿ.ಎನ್.ಜಗದೀಶ್ ಮಾತನಾಡಿ, ಅಪ್ರಾಪ್ತರು, ಮಹಿಳೆಯರು, ಮಕ್ಕಳು ದುರ್ಬಲ ವರ್ಗದವರಾಗಿದ್ದು, ಮೋಸದ ಬಲೆಗೆ ಸುಲಭವಾಗಿ ಬೀಳುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ರಕ್ಷಿಸುವುದು ಅವಶ್ಯಕವಾಗಿದೆ. ಮಾನವ ಕಳ್ಳಸಾಗಣೆ ಮಾಡುವವರಿಗೆ 7 ವರ್ಷದಿಂದ ಜೀವಿತ ಅವಧಿಯವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಕಾನೂನಿನ ಮೂಲಕವೇ ಈ ಜಾಲ ನಿಗ್ರಹಿಸಲು ಸಾಧ್ಯವಾಗುವುದಿಲ್ಲ. ಸರ್ಕಾರೇತರ ಸಂಘ, ಸಂಸ್ಥೆಗಳು ಮತ್ತು ಸೇವಾ ಮನೋಭಾವ ಹೊಂದಿದ ಜನರ ಬೆಂಬಲದ ಅಗತ್ಯವಿದೆ ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವಿ ಮಹೇಶ್ ಮಾತನಾಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ಹಿರಿಯ ಶುಷ್ರುಷಾಧಿಕಾರಿ ಎಚ್.ನೀಲಮ್ಮ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಂದರ್ ರಾಜ್, ಕಾರ್ಯದರ್ಶಿ ಎ.ಡಿ.ಕುಮಾರ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಎ.ಗಿರೀಶ್, ಕಾರ್ಯದರ್ಶಿ ಜೆ.ಸಿ.ಗೋವಿಂದರಾಜ್, ಖಜಾಂಚಿ ಡಿ.ಕೆ.ಮಂಜುನಾಥ್, ಬಾಗೂರು ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಮಂಜೇಗೌಡ, ಆರೋಗ್ಯ ಇಲಾಖೆಯ ಡಿ.ಎಸ್ ಗುರುಮೂರ್ತಿ, ನ್ಯಾಯಾಂಗ ಇಲಾಖೆಯ ಭಗವಾನ್, ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.