

ಹೊಸಪೇಟೆ: ಭಿಕ್ಷಾಟನೆ ಮತ್ತಿತರೆ ದುರುದ್ದೇಶಕ್ಕಾಗಿ ನಡೆಯುತ್ತಿರುವ ಮಾನವ ಕಳ್ಳಸಾಗಾಣಿಕೆ ವಿರುದ್ಧ ಹೋರಾಡುವುದು ಎಲ್ಲರ ಕರ್ತವ್ಯ ಎಂದು ಜಿ.ಪಂ. ಸಿಇಒ ಸದಾಶಿವ ಪ್ರಭು ಬಿ. ಹೇಳಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆ ಮತ್ತು ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಮಾನವ ಕಳ್ಳಸಾಗಾಣಿಕೆಯಲ್ಲಿ ಮಕ್ಕಳು ಮತ್ತು ಮಹಿಳೆಯರು ಹೆಚ್ಚು ತೊಂದರೆಗೆ ಒಳಪಡುತ್ತಾರೆ. ಭಿಕ್ಷಾಟನೆ ಮತ್ತಿತರೆ ದುಷ್ಕೃತ್ಯಗಳಿಗೆ ಅವರನ್ನು ದೂಡಲಾಗುತ್ತದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯವೆಂದು ಹೇಳಿದರು.
ನ್ಯಾಯವಾದಿ ಶ್ವೇತಾಂಬರಿ ಅವರು ಮಾನವ ಕಳ್ಳಸಾಗಾಣಿಕೆಗೆ ವಿಧಿಸುವ ಶಿಕ್ಷೆ, ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ ಪ್ರಸ್ತಾವಿಕವಾಗಿ ಮಾತನಾಡಿದರು.
ಇದಕ್ಕೂ ಮುನ್ನ ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ನ್ಯಾ.ಕಿಶನ್ ಬಿ. ಮಾಡಲಗಿ ಅವರು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಸಾಗಿ ಎಂಸಿಎಚ್ ಆಸ್ಪತ್ರೆಗೆ ತಲುಪಿತು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ಮಕ್ಕಳ ರಕ್ಷಣಾಧಿಕಾರಿ ಸುಭದ್ರಾದೇವಿ, ಆರ್ಸಿಹೆಚ್ ಅಧಿಕಾರಿ ಡಾ.ಜಂಬಯ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೋಗೇಶ್, ಟಿಎಚ್‌ಒ ಡಾ.ಬಸವರಾಜ್ ಪಾಲ್ಗೊಂಡಿದ್ದರು.