

ಬೆಂಗಳೂರು: ದೇಶ ದೇಶದ ನಡುವೆ ಮಾನವ ಕಳ್ಳ ಸಾಗಾಣಿಕೆಗೆ ರಾಜ್ಯವನ್ನು ರಹದಾರಿ ಮಾಡಿಕೊಂಡಿರುವ ಆತಂಕಕಾರಿ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗಂಭೀರವಾಗಿ ಪರಿಗಣಿಸಿದ ಕೇಂದ್ರ ಗೃಹ ಇಲಾಖೆ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ (ಎನ್‌ಐಎ)ವಹಿಸಿದೆ.
ಜೂನ್ 10ರಂದು ಮಂಗಳೂರಿನಲ್ಲಿ ದಾಖಲಾಗಿದ್ದ ಶ್ರೀಲಂಕಾ ಯುವತಿಯರ ಕಳ್ಳ ಸಾಗಾಣಿಕೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲಾಗಿದೆ. ಈಗಾಗಲೇ ರಾಮಮೂರ್ತಿನಗರದಲ್ಲಿ ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನೂ ಹೆಚ್ಚಿನ ತನಿಖೆ ಸಲುವಾಗಿ ಎನ್‌ಐಎಗೆ ನೀಡಲಾಗಿದೆ. ಈ ಎರಡು ಕೇಸ್‌ನಲ್ಲಿ ಮಾನವ ಕಳ್ಳ ಸಾಗಾಣಿಕೆ ದಂಧೆ ಬಯಲಾಗಿದೆ. ಇದರ ಹಿಂದಿರುವ ಕಿಂಗ್‌ಪಿನ್‌ಗಳ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಶ್ರೀಲಂಕಾ ಮೂಲದ 25 ಯುವತಿಯರನ್ನು ಜಲಮಾರ್ಗವಾಗಿ ಹಡಗಿನಲ್ಲಿ ತಮಿಳುನಾಡಿನ ಚೆನ್ನೈಗೆ ಕರೆತಂದು ಅಲ್ಲಿಂದ ಮತ್ತೆ ಹಡಗಿನಲ್ಲಿ ಮಂಗಳೂರು ಪೋರ್ಟ್‌ಗೆ ತಲುಪಿಸಿದ್ದರು. ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ಪಾಸ್‌ಪೋರ್ಟ್ ಮತ್ತು ವೀಸಾ ಇರಲಿಲ್ಲ. ತಕ್ಷಣ ಯುವತಿಯರು ಮತ್ತು ಕಳ್ಳ ಸಾಗಾಣಿಯಲ್ಲಿ ತೊಡಗಿದ್ದ ತಮಿಳುನಾಡು ಮೂಲದ ಅಯ್ಯ ಅಲಿಯಾಸ್ ದಿನಕರನ್ ಮತ್ತು ಕಾಶಿ ವಿಶ್ವನಾಥನ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಶ್ರೀಲಂಕಾ ಮೂಲದ ಈಸನ್ ಎಂಬಾತ ಯುವತಿಯನ್ನು ಕೆನಡಾಕ್ಕೆ ರವಾನಿಸುವಂತೆ ಅಯ್ಯಗೆ ಸೂಚಿಸಿದ್ದ. ಈತ ಕಾಶಿಗೆ 2 ಲಕ್ಷ ರೂ. ಕೊಟ್ಟು ಮಂಗಳೂರಿಗೆ ತಲುಪಿಸುವ ಜವಾಬ್ದಾರಿ ಕೊಟ್ಟಿದ್ದ.
ದೇಶ ಮತ್ತು ವಿದೇಶದ ನಡುವೆ ಮಾನವ ಕಳ್ಳ ಸಾಗಾಣಿಕೆ ದೊಡ್ಡ ದಂಧೆಕೋರರು ಇದ್ದಾರೆ. ಸದ್ಯ ಸಿಕ್ಕವರು ಸಹಾಯಕರು. ಕಿಂಗ್‌ಪಿನ್‌ಗಳ ಬಂಧನ ಆಗಬೇಕಿದೆ. ಈ ದಂಧೆಯಲ್ಲಿ ಭಾರತೀಯರು ಸಿಲುಕಿರುವ ಶಂಕೆಯೂ ಇದೆ. ಇದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾ ಯುವತಿಯರ ಪೂರೈಕೆ: ಬಾಂಗ್ಲಾದೇಶ ಮೂಲದ ಯುವತಿಯರನ್ನು ಕಳ್ಳ ಮಾರ್ಗದಲ್ಲಿ ಕರೆತಂದು ಕರ್ನಾಟಕ, ದೆಹಲಿ, ಕೇರಳ, ಮಹಾರಾಷ್ಟ್ರ ಸೇರಿ ವಿವಿಧೆಡೆ ಅಕ್ರಮ ಚಟುವಟಿಕೆಗೆ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ರಾಮಮೂರ್ತಿ ನಗರದಲ್ಲಿ ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಈ ಸಂಗತಿ ದೃಢವಾಗಿತ್ತು. ಈ ಸಲುವಾಗಿ ಎನ್‌ಐಎ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ರಾಮಮೂರ್ತಿನಗರ ಪ್ರಕರಣದಲ್ಲಿ ಸೆರೆಸಿಕ್ಕ 13 ಆರೋಪಿಗಳು ಮತ್ತು ಸಂತ್ರಸ್ತೆ ಅಕ್ರಮ ವಾಸಿಗಳು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ದಕ್ಷಿಣ ಭಾರತದಲ್ಲಿ ನೆಲೆ: ಬಾಂಗ್ಲಾದೇಶ ಪ್ರಜೆಗಳು ಪಶ್ಚಿಮ ಬಂಗಾಳ ಗಡಿಭಾಗದಲ್ಲಿ ಏಜೆಂಟ್‌ಗಳ ಸಹಾಯದಿಂದ ಭಾರತಕ್ಕೆ ನುಸುಳಿ ನಕಲಿ ಐಡಿ ಕಾರ್ಡ್‌ಗಳನ್ನು ಮಾಡಿಸಿಕೊಂಡು ನಂತರ ದೇಶದ ವಿವಿಧೆಡೆಗೆ ತೆರಳುತ್ತಾರೆ. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ನೆಲೆಸಿದ್ದಾರೆ. ಇನ್ನೂ ಶ್ರೀಲಂಕಾದಲ್ಲಿ ಹೆಚ್ಚಾಗಿ ತಮಿಳುನಾಡಿಗೆ ನಂಟು ಇರುವ ಕಾರಣಕ್ಕೆ ಚೆನ್ನೈ ತಲುಪಿ ಅಲ್ಲಿಂದ ಬೇರೆ ದೇಶಕ್ಕೆ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿದೆ.