ಮಾನವ ಕಳ್ಳಸಾಗಣೆ ತಡೆ ಸಮಿತಿ ಜಾಗೃತವಾಗಲಿ

ಕೆಪಿಎಲ್ ರವಿ 1
ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾಗಾರವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಉದ್ಘಾಟಿಸಿದರು. ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪನಿರ್ದೇಶಕ ಗಂಗಪ್ಪ, ಶಿಕ್ಷಣ ಇಲಾಖೆ ಜಿಲ್ಲಾ ಸಮನ್ವಯಾಧಿಕಾರಿ ಉಮೇಶ ಪೂಜಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ
Published on

ಕೊಪ್ಪಳ: ಮಾನವ ಕಳ್ಳ ಸಾಗಣೆ ಬಹುದೊಡ್ಡ ಅಕ್ರಮ ಜಾಲ.ತಡೆಗೆ ನೇಮಕಗೊಂಡ ಸಮಿತಿಗಳು ಜಾಗೃತರಾಗಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪಿಡಿಒ ಹಾಗೂ ಶಾಲಾ ಮುಖ್ಯ ಶಿಕ್ಷಕರ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಾನವ ಕಳ್ಳ ಸಾಗಣೆ ಜಾಲದಲ್ಲಿ ಸಿಲುಕಿದ ವ್ಯಕ್ತಿಯನ್ನು ಶೀಘ್ರ ಪತ್ತೆ ಹಚ್ಚಬೇಕು. ಇಲ್ಲದಿದ್ದಲ್ಲಿ ಸುಳಿವು ಹುಡುಕುವುದು ಕಷ್ಟ. ಕೊಪ್ಪಳವೂ ಈ ಪಿಡುಗಿಗೆ ಹೊರತಾಗಿಲ್ಲ. ಜಿಲ್ಲೆಯಿಂದ ಮಹಿಳೆ, ಮಕ್ಕಳನ್ನು ಕರೆದೊಯ್ದಿದ್ದು, ಬೇರೆಡೆಯಿಂದ ನಮ್ಮ ಜಿಲ್ಲೆಗೆ ಕರೆತಂದ ಉದಾಹರಣೆಗಳಿವೆ.

ಗ್ರಾಪಂ ಮಟ್ಟದಲ್ಲಿನ ಮಹಿಳೆ, ಮಕ್ಕಳ ಸಾಗಣೆ ತಡೆ ಮತ್ತು ರಕ್ಷಣಾಸಮಿತಿಗಳು ಸಕ್ರಿಯವಾಗಬೇಕಿದೆ. ಶಿಕ್ಷಕರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಅಪರಾಧ ಎಸಗುವ ಬೆಳವಣಿಗೆಗಳು ವರದಿಯಾಗುತ್ತಿವೆ.

ಹೀಗಾಗಿ ಮಕ್ಕಳ ರಕ್ಷಣೆ ಬಗ್ಗೆ ಮೊದಲಿಗಿಂತ ಹೆಚ್ಚಿನ ಕಾಳಜಿವಹಿಸಬೇಕಿದೆ. ಮಕ್ಕಳ ಸುರಕ್ಷತಾ ನೀತಿ-2016ನ್ನು ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲೂ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಿದೆ ಎಂದರು.

ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಮಾತನಾಡಿ, ಮಗುವಿನ ಪ್ರಗತಿಯಲ್ಲಿ ಪಾಲಕರು, ಶಿಕ್ಷಕರು, ಪೊಲೀಸರು ವಹಿಸುವಪಾತ್ರ ಮಹತ್ವದ್ದಾಗಿದೆ. ಮಗುವಿನಲ್ಲಿನ ಪ್ರತಿಭೆ ಹೊರ ತೆಗೆಯುವ ಕೆಲಸ ಶಿಕ್ಷಕರು ಮಾಡಬೇಕು.

ಆಯಾ ಗ್ರಾಪಂ ಪಿಡಿಒಗಳು ಮಕ್ಕಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು. ಮಕ್ಕಳ ಬಗೆಗಿನ ಕಾಯ್ದೆ, ಕಾನೂನುಗಳ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು, ಪಿಡಿಒಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ದೇಹದ ಮೇಲಿನ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶಗಳ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಲು ಮಕ್ಕಳ ರಕ್ಷಣಾ ಘಟಕ ಹೊರತಂದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net