ಮಾನವ ಕಳ್ಳ ಸಾಗಣೆ ತಡೆ ಅಗತ್ಯ

ಗಂಗಾವತಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ನಡೆದ ವಿಶ್ವ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯಲ್ಲಿ ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಬಿ.ಜಯಶ್ರೀ ದೇವರಾಜ್ ಮಾತನಾಡಿದರು. ಸಿಡಿಪಿಒ ಮೇಲ್ವಿಚಾರಕರಾದ ಸುಜಾತಾ ಮತ್ತು ಶಾಹಿನ್ ಬಾನು ಇತರರಿದ್ದರು.
Published on

ಗಂಗಾವತಿ: ಪ್ರಸ್ತುತ ಮಾನವ ಕಳ್ಳ ಸಾಗಣೆ ದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಕಡಿವಾಣಕ್ಕೆ ಸಾರ್ವಜನಿಕ ಸಹಕಾರ ಮುಖ್ಯ ಎಂದು ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಬಿ.ಜಯಶ್ರೀ ದೇವರಾಜ್ ಹೇಳಿದರು.

ನಗರದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವೀರು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ

ಭಾನುವಾರ ಆಯೋಜಿಸಿದ್ದ ವಿಶ್ವ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆಯಲ್ಲಿ ಮಾತನಾಡಿದರು.

ಮಾನವ ಕಳ್ಳ ಸಾಗಣೆ ಗಂಭೀರ ವಿಷಯವಾಗಿದ್ದು, ಮಕ್ಕಳನ್ನು ಅಪಹರಿಸಿ ಅಪರಾಧ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅಪ್ರಾಪ್ತರಿಗೆ ಆಮಿಷವೊಡ್ಡಿ, ಅಕ್ರಮ ಚಟುವಟಿಕೆಗಳಿಗೆ ತಳ್ಳುವ ಸಂಭವ ಇದೆ.

ಸಣ್ಣ ಮಕ್ಕಳನ್ನು ಭಿಕ್ಷಾಟನೆ, ಅಂಗಾಂಗಗಳ ಮಾರಾಟದ ಜಾಲಗಳಿಗೆ ತಳ್ಳಲಾಗುತ್ತಿದೆ. ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಬೇಕಿದ್ದು, ಪ್ರತಿಯೊಬ್ಬರೂ ಜಾಗೃತರಾಗುವಂತೆ ಸಲಹೆ ನೀಡಿದರು.

ಸಿಡಿಪಿಒ ಮೇಲ್ವಿಚಾರಕರಾದ ಸುಜಾತಾ ಮತ್ತು ಶಾಹಿನ್ ಬಾನು ಮಾತನಾಡಿ, ಮಾನವ ಕಳ್ಳ ಸಾಗಣೆ ತಡೆಗೆ ಗ್ರಾಮ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಸಮಿತಿ ರಚಿಸಲಾಗಿದೆ.

ನಿಯಂತ್ರಣಕ್ಕೆ ಜಿಲ್ಲಾ ಮಟ್ಟದ ಕಾರ್ಯಪಡೆಗಳು ಮತ್ತು ಎಲ್ಲ ಇಲಾಖೆಗಳು ಸಹಕಾರ ನೀಡಬೇಕಿದೆ ಎಂದರು. ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬಳ್ಳಾರಿಯ ರೀಡ್ಸ್ ಸಂಸ್ಥೆಯ ಪ್ರತಿನಿಧಿಗಳಾದ ಪ್ರವೀಣ್, ಜ್ಯೋತಿ, ಮಂಜುನಾಥ್, ಐಶ್ವರ್ಯಾ, ನೇತ್ರಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net