

ಉಡುಪಿ: ಆರ್ಥಿಕವಾಗಿ ತೀರಾ ಹಿಂದುಳಿದ ಸೌಕೂರಿನ ಕುಟುಂಬ ಬೆಳಕು ಯೋಜನೆ ಫಲಾನುಭವಿಯಾಗಿದ್ದು, ನೆರೆಮನೆಯವರ ಅಕ್ಷೇಪ ಹಿನ್ನೆಲೆಯಲ್ಲಿ ಮನೆಯ ವಯರಿಂಗ್ ಮಾಡಿಸಿ ನಾಲ್ಕು ವರ್ಷ ಕಳೆದರೂ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಪ್ರಸ್ತುತ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡಿದ್ದರೂ ಯೋಜನೆ ಜಾರಿಗೆ ರ್ನಿಲಕ್ಷ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡಲಾಗುವುದು ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ. ರವೀಂದ್ರನಾಥ ಶಾನ್ ಭಾಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕುಂದಾಪುರ ತಾಲೂಕಿನ ತೀರಾ ಹಿಂದುಳಿದ ಪ್ರದೇಶವಾದ ಮಲೆನಾಡಿನ ಸೌಕೂರಿನ ನಿವಾಸಿಗಳಾದ ಗಣೇಶ್ ದೇವಾಡಿಗ ಹಾಗೂ ಮಾಲತಿ ಬಿಪಿಎಲ್ ಕಾರ್ಡ ಹೊಂದಿದ್ದು, 2019ರಲ್ಲಿ ಸರ್ಕಾರದ ಬೆಳಕು ಯೋಜನೆ ಅಡಿ ಫಲಾನುಭವಿಯಾಗಿ ಆಯ್ಕೆಯಾಗಿದ್ದರು. ಮನೆಯ ಕಾಂಪೌಂಡ್ ಪಕ್ಕದಲ್ಲಿಯೇ ವಿದ್ಯುತ್ ಕಂಬವಿದ್ದು, ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂ ಅಧಿಕಾರಿಗಳು ಬಂದಾಗ ಪಕ್ಕದ ಮನೆಯ ವಾಸುದೇವ ದೇವಾಡಿಗ ಎಂಬುವವರು ಆಕ್ಷೇಪಿಸಿದರು. ಈ ಹಿನ್ನೆಲೆಯಲ್ಲಿ ಮೆಸ್ಕಾಂ ಅಧಿಕಾರಿಯವರು ಭಾರತೀಯ ವಿದ್ಯುತ್ ಕಾಯ್ದೆಯ 164 ಸೆಕ್ಷನ್ ಅಡಿಯಲ್ಲಿ ಉಡುಪಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ, ನಿರ್ದೇಶನ ಕೋರಿದ್ದರು. ವಾದಿ ಪ್ರತಿವಾದಿಗಳೆಲ್ಲರಿಗೂ ನೋಟಿಸು ನೀಡಿ, ಲಿಖಿತ ಹೇಳಿಕೆ ಪಡೆದು ತನಿಖೆ ನಡೆಸಿದ ಜಿಲ್ಲಾಧಿಕಾರಿ ಕೂಮಾರ್ರಾವ್ ಅವರು 2020ರ ಏಪ್ರಿಲ್ ತಿಂಗಳಲ್ಲಿ ಪ್ರತಿವಾದಿಗಳ ಎಲ್ಲಾ ಆಕ್ಷೇಪಗಳನ್ನು ವಜಾಗೊಳಿಸಿ, ಆಕ್ಷೇಪದಾರರ ಸ್ವತ್ತುಗಳಿಗೆ ಹಾನಿಯಾಗದಂತೆ ಎಚ್ಚರವಹಿಸಿ ಮಾಲತಿಯವರಿಗೆ ಸಂಪರ್ಕ ನೀಡಲು ಮೆಸ್ಕಾಂ ಅಧಿಕಾರಿಗಳಿಗೆ ಸ್ಪಷ್ಟ್ಟವಾಗಿ ಆದೇಶಿಸಿದ್ದರು ಎಂದರು.
ನ್ಯಾಯಾಲಯದಲ್ಲಿ ಅಪೀಲು
ಜಿಲ್ಲಾಧಿಕಾರಿಯವರ ಅದೇಶಕ್ಕೆ ತಡೆಯಾಜ್ನೆ ಕೋರಿ ವಾಸುದೇವ ದೇವಾಡಿಗ ಕುಂದಾಪುರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ಜು.16, 2022 ರಂದು ಅರ್ಜಿಯನ್ನೂ ತಿರಸ್ಕರಿಸಿದ್ದು, ನಂತರ ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದರು. ಅಕ್ಟೋಬರ್ 14, 2022 ರಂದು ಹಿರಿಯ ನ್ಯಾಯಾಲಯವೂ ಅವರ ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿತು. ಸಂತ್ರಸ್ತೆ ಮಾಲತಿ ಪರವಾಗಿ ಬಂದಿದ್ದ ಈ ಮೇಲಿನ ಎಲ್ಲಾ ಮೂರು ಆದೇಶಗಳನ್ನು ಲಗತ್ತಿಸಿ ನವೆಂಬರ್ ತಿಂಗಳಲ್ಲಿ ಮೆಸ್ಕಾಂ ಅಧಿಕಾರಿಗಳಿಗೆ ಸಂಪರ್ಕ ನೀಡಲು ಕೋರಿದರೂ ಅವರು ಸ್ಪಂದಿಸಲಿಲ್ಲ. ಹೀಗಾಗಿ ಸಂತ್ರಸ್ತೆ ಮಹಿಳೆ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದ್ದು, ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ಕಾರಣ ಕೇಳಿ ಪತ್ರ ಬರೆಯುತ್ತಿದ್ದರೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಹೀಗಾಗಿ ಮೆಸ್ಕಾಂ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡಲು ಚಿಂತನೆ ನಡೆಸಲಾಗಿದೆ. ಕೋರ್ಟ್ನಲ್ಲಿ ಮಾಡಿದ ಖರ್ಚುವೆಚ್ಚಗಳನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.
ಇತ್ತೀಚೆಗೆ ನಮ್ಮ ಪ್ರತಿಷ್ಠ್ಠಾನದ ಕಚೇರಿಗೆ ಭೇಟಿ ನೀಡಿದ ಕಾನೂನು ಸಚಿವ ಎಚ್.ಕೆ ಪಾಟೀಲರು ಸರ್ಕಾರಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು ಮೀನಮೇಷ ಎಣಿಸುವ ಅಥವಾ ಲಂಚ ಕೊಡುವ ತನಕ ಸತಾಯಿಸುವ ಪ್ರಕರಣಗಳಿದ್ದಲ್ಲಿ ನೇರವಾಗಿ ತಮ್ಮ ಗಮನಕ್ಕೆ ತರುವಂತೆ ಸೂಚಿಸಿದ್ದಾರೆ. ಈಗಾಗಲೇ ಈ ಪ್ರಕರಣದ ಕುರಿತು ವಿವರವಾದ ವರದಿ ಕಾನೂನು ಇಲಾಖೆಗೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸೌಕೂರಿನ ಮಾಲತಿ ದೇವಾಡಿಗ, ಗಣೇರ್ಶ ದೇವಾಡಿಗ, ಮಗಳು ರೇಣುಕಾ, ಪ್ರತಿಷ್ಠಾನ ಕಾರ್ಯದರ್ಶಿ ಅನುರಾಗ್ ಕಿಣಿ, ಸದಸ್ಯರಾದ ಪಿ.ವಿ. ರಾವ್, ರಮೇಶ್ ಶೆಣೈ, ಅನಿಲ್ ದೇವಾಡಿಗ ಉಪಸ್ಥಿತರಿದ್ದರು.