ರಸ್ತೆಗೆ ಜೋಡಿಸಿರುವ ಕಲ್ಲು ತೆರವುಗೊಳಿಸಿ: ಮಾನವ ಹಕ್ಕುಗಳ ರಕ್ಷಣಾ ಪಡೆ ಸಂಘಟನೆಯಿಂದ ಮನವಿ

Human Rights Defenders Organization submits petition Mandya
Published on

ಮಂಡ್ಯ: ಮದ್ದೂರು ತಾಲೂಕು ಗೆಜ್ಜಲಗೆರೆ ಗ್ರಾಮಕ್ಕೆ ಸೇರಿದ ಜಮೀನಿನಲ್ಲಿ ಪರಿಶಿಷ್ಟ ಜಾತಿಯ ಬಡಾವಣೆಗೆ ಹೋಗುವ ರಸ್ತೆಗೆ ಜೋಡಿಸಿರುವ ಕಲ್ಲುಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಪಡೆ ಸಂಘಟನೆಯ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಗೆಜ್ಜಲಗೆರೆ ಗ್ರಾಮಕ್ಕೆ ಸೇರಿದ ಸ.ನಂ.267ರ ಜಮೀನಿನಲ್ಲಿ(ಮನ್‌ಮುಲ್ ಎದುರು) ಬಸವನಪುರಕ್ಕೆ ಹೋಗುವ ರಸ್ತೆಯಲ್ಲಿ ಪರಿಶಿಷ್ಟ ಜಾತಿಯ ಜನಾಂಗದವರಿಗೆ ನಿವೇಶನಗಳನ್ನು ನೀಡಲು 1.2 ಎಕರೆ ಜಮೀನಿದೆ. ಇದರ ಪೈಕಿ 32 ಗುಂಟೆ ಜಮೀನನ್ನು ನಿವೇಶನಗಳನ್ನಾಗಿ ಪರಿಶಿಷ್ಟ ಜಾತಿಗೆ ಸೇರಿದ 23 ಜನರಿಗೆ ಹಂಚಿಕೆ ಮಾಡಿದ್ದಾರೆ. ಈ ಜಮೀನಿನಲ್ಲಿ ಇನ್ನು 10 ಗುಂಟೆ ಜಾಗವಿದೆ. ಆದರೆ ಪರಿಶಿಷ್ಟ ಜಾತಿಗೆ ಹಂಚಿಕೆ ಮಾಡದೇ ಅಕ್ರಮವಾಗಿ ಖಾತೆ ಮಾಡಲಾಗಿದೆ ಎಂದು ಆರೋಪಿಸಿದರು.

ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಅವರು ಸೂಕ್ತ ಕ್ರಮ ತೆಗೆದುಕೊಂಡು ಗ್ರಾಮಕ್ಕೆ ಹೋಗುವ ರಸ್ತೆಯ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈಗ ರಸ್ತೆಗೆ ಅಡ್ಡಲಾಗಿ ಹಾಕಿರುವ ಕಲ್ಲುಗಳನ್ನು ಸಂಬಂಧಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ಪಡೆಯ ಸಂಸ್ಥಾಪಕ ಸಿ.ಎಚ್.ಚಂದ್ರಕುಮಾರ್, ಮುಖಂಡರಾದ ಸಿ.ಅಂಬುಜಿ, ಎಸ್.ಮಹೇಶ್, ಬಿ.ಸಿ.ಅಭಿಷೇಕ್, ಬಿ.ಎಸ್.ಭೀಮೇಶ್, ಬಿ.ಎನ್.ಮಹೇಶ್, ಎಂ.ನಿಂಗಯ್ಯ, ಸಲ್ಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net