

ಮಡಿಕೇರಿ: ಮಾನವ ಹಕ್ಕುಗಳ ದಿನಾಚರಣೆ ಇಂದಿಗೆ ಮಾತ್ರ ಸೀಮಿತವಾಗದೆ ಪ್ರತಿ ದಿನವೂ ಅನುಸರಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಹೇಳಿದರು.
ನಗರದ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ ಮತ್ತು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾನವ ಹಕ್ಕುಗಳು ಉಲ್ಲಂಘನೆಯಾದರೆ ಈ ಹಿಂದೆ ಕೇಳಲು ಆಗುತ್ತಿರಲಿಲ್ಲ. ಆದರೆ ಈಗ ಮಾನವ ಹಕ್ಕುಗಳ ಆಯೋಗ, ಕಾನೂನು ನ್ಯಾಯಾಲಯವಿದೆ. ನಾವುಗಳು ತಿಳಿಯದವರಿಗೆ ಈ ಬಗ್ಗೆ ಜಾಗೃತಿ ಅರಿವು ಮೂಡಿಸಬೇಕಿದೆ. ಸಮನಾಗಿ ಜೀವಿಸುವ ಹಕ್ಕು ಎಲ್ಲರಿಗೂ ಇದೆ. ಪ್ರಸಕ್ತ ತಪ್ಪು ಮಾಡಿದಾಗ ಎಚ್ಚರಿಸಲು ಸಂಸ್ಥೆಗಳಿವೆ. ಮಾನವ ಹಕ್ಕುಗಳ ದಿನಾಚರಣೆ ಇಂದಿಗೆ ಮಾತ್ರ ಸೀಮಿತವಾಗದೆ ಪ್ರತಿ ದಿನವೂ ಅನುಸರಿಸುವಂತಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಎಂ.ಭೃಂಗೇಶ್‌ರವರು, ಜೀವನ ಎಂಬುದು ವಿದ್ಯಾಭ್ಯಾಸದ ನಂತರ ಪ್ರಾರಂಭವಾಗುತ್ತದೆ. ಅದುವರೆಗೂ ನಾವೆಲ್ಲರೂ ಬಾಲ್ಯವಸ್ಥೆಯಲ್ಲಿರುತ್ತೇವೆ. ನಂತರ ಜೀವನ ಎಂಬುದು ಏನು ಎಂದು ಅರಿವು ಆಗುತ್ತದೆ ಎಂದರು.
ಭಾರತದ ಸಂವಿಧಾನದಲ್ಲಿ ಮಾನವ ಹಕ್ಕುಗಳ ಬಗ್ಗೆ ಬಹಳಷ್ಟು ಮಹತ್ವ ನೀಡಲಾಗಿದೆ. ನಾವು ನಮ್ಮ ಹಕ್ಕನ್ನು ರಕ್ಷಿಸುವುದರೊಂದಿಗೆ ಇತರರ ಹಕ್ಕುಗಳಿಗೂ ಚ್ಯುತಿ ಬರದಂತೆ ನೋಡಿಕೊಳ್ಳುವುದು ಮುಖ್ಯ ಎಂದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ವಕೀಲರ ಸಂಘದ ಅಧ್ಯಕ್ಷ ಕೆ.ಡಿ.ದಯಾನಂದರವರು ಮಾನವ ಹಕ್ಕುಗಳ ಕುರಿತು ಮಾತನಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುನಿರತ್ನಮ್ಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಇತರರು ಇದ್ದರು.