

ಮೋರಟಗಿ: ಮೂಲಭೂತ ಹಕ್ಕುಗಳ ಬಗ್ಗೆ ಅರಿಯುವುದು ಅಗತ್ಯ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಎಚ್.ಕೆ. ಉಮೇಶ ಹೇಳಿದರು.
ಸಿಂದಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಕಾಟ್ ಪ್ರೆಸ್ ಸಹಯೋಗದಲ್ಲಿ ಮಾನವ ಹಕ್ಕುಗಳ ದಿನಾಚರಣೆ ನಿಮಿತ್ತ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಸ್ವತಂತ್ರ ಜೀವನ ನಡೆಸುವ ಹಕ್ಕಿದೆ. ಬೇಕಾದ್ದನ್ನು ತಿನ್ನುವ, ವಾಸಿಸುವ, ಎಲ್ಲೆಂದರಲ್ಲಿ ಓಡಾಡುವ ಹಕ್ಕಿದೆ. ಅವುಗಳನ್ನೇ ಮಾನವ ಹಕ್ಕುಗಳು ಎನ್ನುತ್ತೇವೆ. ಈ ಮೂಲ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ ಎಂದು ಹೇಳಿದರು.
ನ್ಯಾಯಾಧೀಶ ಆಶಪ್ಪ ಸಣ್ಣಮನಿ ಮಾತನಾಡಿ, ಹಕ್ಕುಗಳಿಗೆ ಗೌರವ ಸಿಗಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಡಿ.10 ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಸಿಂದಗಿ ಪೊಲೀಸ್ ಠಾಣೆಯ ಎಸ್‌ಐ ಸಂಗಮೇಶ ಹೊಸಮನಿ, ವಕೀಲರ ಸಂಘದ ಅಧಕ್ಷ ಎಸ್.ಬಿ. ದೊಡಮನಿ, ಅಪರ ಸರ್ಕಾರಿ ವಕೀಲ ಎಂ.ಎಸ್. ಪಾಟೀಲ, ರಾಜಶೇಖರ ಕಮದಡ್ಡಿ, ಅಶೋಕ ದಿಂಡವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.